ಭಾರಿ ಕುತೂಹಲ ಕೆರಳಿಸಿದ್ದ 2023ರ ಸಾಲಿನ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಸ್ಪಷ್ಟ ಚಿತ್ರಣ ಇದೀಗ ಹೊರಬಿದ್ದಿದೆ. ಈ ಬಾರಿ ಸಂಪೂರ್ಣವಾಗಿ ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಿ ನಡೆಯಬೇಕಿತ್ತು. ಆದರೆ, ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಅಲ್ಲಿಗೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಟ್ಟು ಹಿಡಿದಿತ್ತು. ಇದೀಗ ಕೊನೆಗೂ ಗೆಲುವು ಬಿಸಿಸಿಐ ಪಾಲಾಗಿದೆ. ಟೀಮ್ ಇಂಡಿಯಾ ನಿಲುವಿಗೆ ಮಣೆ ಹಾಕಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ), 2023ರ ಸಾಳಿನ ಏಷ್ಯಾ ಕಪ್ ಟೂರ್ನಿಯ ಆತಿಥ್ಯವನ್ಜು ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ವಹಿಸಿದೆ.
ಆಗಸ್ಟ್ 31ರಂದು ಏಷ್ಯಾ ಕಪ್ 2023 ಟೂರ್ನಿ ಶುರುವಾಗಲಿದ್ದು, ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಗ್ರೂಪ್ ಹಂತ, ಸೂಪರ್ ಫೋರ್ ಮತ್ತು ಫೈನಲ್ ಸೇರಿದಂತೆ ಒಟ್ಟು 9 ಪಂದ್ಯಗಳಿಗೆ ಶ್ರೀಲಂಕಾ ವೇದಿಕೆ ಒದಗಿಸಲಿದೆ. ಸೆಪ್ಟೆಂಬರ್ 17ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಒಟ್ಟಾರೆ 13 ಪಂದ್ಯಗಳ ಆಯೋಜನೆ ಆಗಲಿದೆ. ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎರಡು ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಈ ಬಾರಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ನೇಪಾಳ ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿವೆ.
“ಟೂರ್ನಿಯನ್ನು ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ. 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಟೂರ್ನಿಯ ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ವೇದಿಕೆ ಒದಗಿಸಲಿದೆ. 2023ರ ಸಾಲಿನ ಟೂರ್ನಿಯಲ್ಲೂ ಗ್ರೂಪ್ ಹಂತದಲ್ಲಿ 2 ತಂಡಗಳು ಇರಲಿವೆ. ಗ್ರೂಪ್ ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 4 ಹಂತಕ್ಕೆ ಕಾಲಿಡಲಿವೆ. ಇಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳ ನಡುವೆ ಫೈನಲ್ ನಡೆಯಲಿದೆ. ಈ ಹೈ-ವೋಲ್ಟೇಜ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ವಿಶ್ವದ ವಿವಿಧ ಭಾಗಗಳಿಂದ ಕ್ರಿಕೆಟ್ ಪ್ರಿಯರು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆಂದು ಎದುರು ನೋಡುತ್ತಿದ್ದೇವೆ,” ಎಂದು ಎಸಿಸಿ ವಿವರಿಸಿದೆ.