ಕರ್ಮಷಿಯಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆ ಈ ವಾರ ತೆರೆಗೆ ಬಂದ ಹಳ್ಳಿ ಸೊಗಡಿನ ಟಗರು ಪಲ್ಯವನ್ನು ಪ್ರೇಕ್ಷಕ ಚಪ್ಪರಿಸಿಕೊಂಡು ಸವಿಯುತ್ತಿದ್ದಾರೆ. ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದ್ದ ಚಿತ್ರ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಾಗಿದೆ.
ಟಗರು ಪಲ್ಯ ರಿಮೇಕ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಸಂಬಂಧ, ಪ್ರೀತಿ, ನಗು, ಅಳು..ಟೋಟಲಿ ಒಂದೊಳ್ಳೆ ಫ್ಯಾಮಿಲಿ ಡ್ರಾಮಾ ಎನಿಸಿಕೊಂಡಿರುವ ಟಗರು ಪಲ್ಯ ಸಿನಿಮಾ ಬಗ್ಗೆ ಪ್ರೇಕ್ಷಕ ಮುಕ್ತ ಕಂಠದಿಂದ ಹೊಗಳುತ್ತಿದ್ದಾನೆ. ವಿಮರ್ಶಕರು ಹಾಗೂ ಪ್ರೇಕ್ಷಕರ ವಲಯದಿಂದಲೂ ಭಾರೀ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾ ರಿಮೇಕ್ ಗೆ ಬೇಡಿಕೆ ಹೆಚ್ಚಿದೆ. ಟಗರು ಪಲ್ಯ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪರಭಾಷ ನಿರ್ಮಾಪಕರು ಚಿತ್ರಕ್ಕೆ ಫಿದಾ ಆಗಿದ್ದಾರಂತೆ. ಹಾಗಾಗಿ ಚಿತ್ರದ ರಿಮೇಕ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಶುರುವಾಗಿದೆಯಂತೆ. ತಮಿಳು, ತೆಲುಗು ಭಾಷೆಯಿಂದ ಬೇಡಿಕೆ ಹೆಚ್ಚಾಗಿದೆಯಂತೆ. ಈಗಾಗಲೆ ಮಾತುಕತೆ ಹಂತದಲ್ಲಿದ್ದು ಸದ್ಯದಲ್ಲೇ ರಿಮೇಕ್ ರೈಟ್ಸ್ ಸೇಲ್ ಆಗಲಿದೆ.
ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ಮೂರನೇ ಚಿತ್ರವಾಗಿರುವ ಟಗರು ಪಲ್ಯ ಸಿನಿಮಾಗೆ ಉಮೇಶ್ ಕೆ ಕೃಪಾ ಆಕ್ಣನ್ ಕಟ್ ಹೇಳಿದ್ದು, ಮೊದಲ ಹೆಜ್ಜೆಯಲ್ಲಿ ಇವರು ಗೆದ್ದಿದ್ದಾರೆ. ತಾರಾ ಅನುರಾಧಾ, ರಂಗಾಯಣ ರಘು, ಅಮೃತಾ ಪ್ರೇಮ್, ನಾಗಭೂಷಣ್ ಸೇರಿದಂತೆ ಇಡೀ ಕಲಾವಿದರು ತಮ್ಮ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ , ಧನಂಜಯ್ ಸಾಹಿತ್ಯ, ಎಸ್ ಕೆ ರಾವ್ ಛಾಯಾಗ್ರಹಣ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.
ಸಿನಿಮಾ ನೋಡಲಿದ್ದಾರೆ ಕ್ವೀನ್
ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬರ್ತಿದ್ದು, ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. ಜೊತೆಗೆ ಇಂದೇ ಸಿನಿಮಾ ನೋಡಲಿದ್ದಾರೆ. ಇನ್ನು ಧನಂಜಯ್ ಹೈದ್ರಾಬಾದ್ ನಲ್ಲಿಂದು ಅಭಿಮಾನಿಗಳೊಟ್ಟಿಗೆ ಟಗರು ಪಲ್ಯ ಸಿನಿಮಾ ವೀಕ್ಷಿಸಲಿದ್ದಾರೆ.