100-200 ಮೀಟರ್ ಅಂತರದ ನಡುವೆ ಸಂಪರ್ಕ ಕೊಂಡಿ ನಿರ್ಮಿಸಲು ಎಡವುತ್ತಿರೋದು ಜನರ ಗೋಳಾಟಕ್ಕೆ ಕಾರಣವಾಗಿದೆ. ಇದಕ್ಕೆ ಬೆಸ್ಟ್ ಎಕ್ಸಂಪಲ್ ಬನಶಂಕರಿ ಜಂಕ್ಷನ್
ಒಂದು ಕಡೆ ಬನಶಂಕರಿ ದೇವಿಯ ದೇವಸ್ಥಾನ. ಎದುರು ಭಾಗದಲ್ಲಿಯೇ ಮೆಟ್ರೋ ನಿಲ್ದಾಣ. ಅದರ ಪಕ್ಕದಲ್ಲೇ ಬಿಎಂಟಿಸಿ ಟಿಟಿಎಂಸಿ. ಆದರೆ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಜನ ಪರದಾಡ್ತಿದ್ದಾರೆ. ಯಮರೂಪಿಯಂತೆ ನುಗ್ಗಿಬರುವ ವಾಹನಗಳಿಂದ ತಪ್ಪಿಸಿಕೊಂಡು ರಸ್ತೆ ದಾಟುವ ಸಾಹಸ, ಜೀವ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ. ಸ್ವಂತ ವಾಹನದಲ್ಲಿ ಬಂದರೆ ಇಲ್ಲದ ಪಾರ್ಕಿಂಗ್ ವ್ಯವಸ್ಥೆ, ಈ ಸಮೂಹ ಸಾರಿಗೆ ಸಹವಾಸ ಬೇಡ ಅಂತ ಆಟೋ ಹತ್ತಬೇಕಾದರೂ ರಸ್ತೆ ದಾಟುವ ಅನಿವಾರ್ಯತೆ. ಅಬ್ಬಬ್ಬ. ಇಲ್ಲಿ ಒಂದೇ ಒಂದು ಸ್ಕೈವಾಕ್ ಇದ್ದಿದ್ರೆ ಇದೆಲ್ಲ ಸಮಸ್ಯೆಯೇ ಆಗ್ತಿರಲಿಲ್ಲ ಎಂದು ಪಾದಚಾರಿ ಅಶ್ಮಿತಾ ತಿಳಿಸಿದರು.
ಕಳೆದ ಹಲವು ದಶಕದಿಂದ ಇದೇ ಸಮಸ್ಯೆಯಿದ್ರೂ, ಯಾವುದೇ ಕ್ರಮ ಆಗ್ದಿರೋದು ಜನರ ಬೇಸರಕ್ಕೆ ಕಾರಣವಾಗಿದೆ. ಬನಶಂಕರಿ ಟಿಟಿಎಂಸಿ ಮತ್ತು ಮೆಟ್ರೋ ಅಣತಿ ದೂರದಲ್ಲೇ ಇವೆ. ಇವುಗಳ ನಡುವೆ ಇಂಟರ್ಚೇಂಜ್ ನಿರ್ಮಾಣವಾದರೆ, ಯಾವುದೇ ಅಡತಡೆ ಇಲ್ಲದೆ ಸಂಚರಿಸಬಹುದು. ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಅಂತ ಸಾರ್ವಜನಿಕರು ಹೇಳಿದರು.
ಇನ್ನೂ ಒಂದು ಸ್ಕೈವಾಕ್ ನಿರ್ಮಿಸಲು ಬೆಂಗಳೂರಿನ ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕಳೆದ ಮೂರು ವರ್ಷದಿಂದ ಪರದಾಡ್ತಿದ್ದಾರೆ. ಪತ್ರ ಬರೆದಿದ್ದರು ಇದುವರೆಗೆ ಅದು ಆಗಿಲ್ಲ, ಬಿಬಿಎಂಪಿ, ಬಿಎಂಆರ್ಸಿಎಲ್, ಬಿಎಂಟಿಸಿ ನಡುವೆಯೇ ಫೈಲ್ ಓಡಾಡುತ್ತಿದೆ. ಇಂತಹ ಹತ್ತಕ್ಕೂ ಹೆಚ್ಚು ಮಿಸ್ಸಿಂಗ್ ಲಿಂಕ್’ಗಳು ಹಲವು ವರ್ಷಗಳಿಂದ ಸಂಪರ್ಕ ಕೊಂಡಿಗಾಗಿ ಕಾದುಕುಳಿತಿವೆ. ಸಾವಿರಾರು ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನದಲ್ಲಿರುವ ಉತ್ಸಾಹ ಹತ್ತಾರು ಕೋಟಿ ಮೊತ್ತದಲ್ಲಿ, ಕೆಲವೇ ತಿಂಗಳುಗಳಲ್ಲಿ ಮಾಡಿಮುಗಿಸಬಹುದಾದ ಈ ಸೇತುವೆಗಳ ನಿರ್ಮಾಣದಲ್ಲಿ ಸರ್ಕಾರಕ್ಕಾಗಲಿ, ಅಧಿಕಾರಿಗಳಿಗಾಗಲಿ ಇಲ್ಲವಾಗಿದೆ.