ಮಂಡ್ಯ: ತಡೆಗೋಡೆ ಇಲ್ಲದ ಪರಿಣಾಮ 2018ರಲ್ಲಿ ಖಾಸಗಿ ಬಸ್ಸೊಂದು ನಾಲೆಗೆ ಉರುಳಿ 30 ಜನರು ಮೃತರಾಗಿದ್ರು. ಘಟನೆಯಿಂದ ಎಚ್ಚೆತ್ತುಕೊಳ್ಳದ ಮಂಡ್ಯ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಕಾರು ನಾಲೆಗೆ ಉರುಳಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಘಟನೆಯಿಂದ ಆಕ್ರೋಶಗೊಂಡಿರೋ ಸ್ಥಳೀಯ ಜನ್ರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಈ ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ
ನಾಲೆಯಲ್ಲಿ ಮುಳುಗಿದ್ದ ಕಾರನ್ನು ಕ್ರೇನ್ ಮೂಲಕ ಹೊರ ತೆಗೆಯುತ್ತಿರುವ ಅಗ್ನಿಶಾಮಕ ಸಿಬ್ಬಂದಿ… ನಾಪತ್ತೆಯಾಗಿರೋ ಚಾಲಕನಿಗಾಗಿ ಶೋಧ ನಡೆಸ್ತಿರೋ ಅಗ್ನಿಶಾಮಕ ಸಿಬ್ಬಂದಿ… ಸ್ಥಳದಲ್ಲಿ ಮುಗಿಲು ಮುಟ್ಟಿದ ನಾಪತ್ತೆಯಾಗಿರುವ ಚಾಲಕನ ಕುಟುಂಬಸ್ಥರ ಆಕ್ರಂಧನ… ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು, ಆಕ್ರೋಶ ಹೊರ ಹಾಕ್ತಿರೋ ಸ್ಥಳೀಯರು… ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ…
ಈ ಫೋಟೋದಲ್ಲಿರೋ ವ್ಯಕ್ತಿ ಹೆಸರು ಲೋಕೇಶ್ ಅಂತಾ. ಮಂಡ್ಯ ತಾಲೂಕಿನ ಶಿವಳ್ಳಿ ಗ್ರಾಮದ ನಿವಾಸಿ. ಸ್ನೇಹಿತರಿಂದ ಕಾರು ಪಡೆದು ಕೆಲಸ ನಿಮಿತ್ತ ಪಾಂಡವಪುರಕ್ಕೆ ಹೊರಟಿದ್ರು. ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದಿದೆ. ಭಾರಿ ಶಬ್ದ ಕೇಳಿದ ಸ್ಥಳೀಯರು ನಾಲೆಯತ್ತ ನೋಡಿದಾಗ ಚಾಲಕ ಲೋಕೇಶ್ ಕಾರಿನಿಂದ ಮೇಲೆ ಬಂದ ದೃಶ್ಯವನ್ನ ಗಮನಿಸಿದ್ದಾರೆ. ಸ್ಥಳೀಯ ವ್ಯಕ್ತಿಗೆ ಈಜು ಬಾರದ ಕಾರಣ ಸಹಾಯಕ್ಕಾಗಿ ಅಕ್ಕಪಕ್ಕದ ಜನರನ್ನ ಕೂಗಿ ಬರೋದ್ರಲ್ಲಿ ಚಾಲಕ ಲೋಕೇಶ್ ಕಣ್ಮರೆಯಾಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ತಿಬ್ಬನಹಳ್ಳಿ, ಜಯಪುರ, ಶಿವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಜಮಾಯಿಸಿದ್ರು. ಶಿವಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಮೂಲಕ ನಾಲೆಯಲ್ಲಿ ಮುಳುಗಿದ್ದ ಕಾರನ್ನ ಹೊರ ತೆಗೆದಿದ್ದಾರೆ. ಕಾರು ಹೊರ ತೆಗೆದ್ರು ಅದರಲ್ಲಿದ್ದ ಚಾಲಕ ಲೋಕೇಶ್ ಮಾತ್ರ ಪತ್ತೆಯಾಗಲಿಲ್ಲ. ಚಾಲಕ ಲೋಕೇಶ್ ನೀರಿನ ರಭಸಕ್ಕೆ ನಾಲೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜು ತಜ್ಞರ ಸಹಾಯದಿಂದ ನಾಪತ್ತೆಯಾಗಿರುವ ಚಾಲಕ ಲೋಕೇಶ್ ಪತ್ತೆಗಾಗಿ ನಾಲೆಯಲ್ಲಿ ಹುಡುಕಾಟ ನಡೆಸ್ತಿದ್ದಾರೆ.
ಚಾಲಕ ಲೋಕೇಶ್ ಗೆ ಕೂಡ ಈಜು ಬರುತ್ತಿರಲಿಲ್ಲ. ಹೀಗಾಗಿ ನೀರಿನ ರಭಸಕ್ಕೆ ಲೋಕೇಶ್ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳದಲ್ಲಿ ನಾಪತ್ತೆಯಾಗಿರುವ ಚಾಲಕ ಲೋಕೇಶ್ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದ್ರು. ಈ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುವ ಜೊತೆಗೆ ಅಸಹಾಯಕತೆ ವ್ಯಕ್ತಪಡಿಸಿದ್ರು.
ಇನ್ನು ಘಟನೆಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸ್ತಿರೋ ಸ್ಥಳೀಯ ಜನ್ರು, ಸ್ಥಳಕ್ಕಾಗಮಿಸಿದ PWD ಇಲಾಖೆ ಅಧಿಕಾರಿ ಜಗದೀಶ್ ಅವರನ್ನ ತೀವ್ರ ತರಾಟೆಗೆ ತೆಗೆದುಕೊಂಡ್ರು. 2018ರಲ್ಲಿ ನಡೆದ ಕನಗನಮರಡಿ ಬಸ್ ದುರಂತದ ಬಳಿಕ ಈ ನಾಲೆಗೆ ತಡೆಗೋಡೆ ಹಾಕಲಾಗಿತ್ತು. ರಸ್ತೆ ನಿರ್ಮಾಣ ಮಾಡುವ ವೇಳೆ ಗುತ್ತಿಗೆದಾರರು ಹಾಕಿದ್ದ ತಡೆಗೋಡೆ ತೆರವು ಮಾಡಿರೋದೇ ಈ ಘಟನೆಗೆ ಕಾರಣ.
ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಬಲಿಬೇಕು ಎಂದು ಶಾಸಕ, ಎಸ್ಪಿ ಎದುರೇ PWD ಇಲಾಖೆ ಅಧಿಕಾರಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ರು. ಏನೇ ಹೇಳಿ, ಮಂಡ್ಯ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಅಪಘಾತ ಸಂಭವಿಸಿದೆ. ಇನ್ನಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ತಾರ? ಇಂತಹ ಅಪಾಯಕಾರಿ ತಿರುವು, ನಾಲೆಗಳ ಬಳಿ ತಡೆಗೋಡೆ ಹಾಕ್ತಾರ? ಅನ್ನೋದನ್ನ ಕಾದು ನೋಡ್ಬೇಕಿದೆ.