ಇಸ್ಲಾಮಾಬಾದ್: 45ಕ್ಕೂ ಹೆಚ್ಚು ಮಹಿಳೆಯರನ್ನು ಅತ್ಯಾಚಾರವೆಸಗಿ, ವೀಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ಕರಾಚಿಯ (Karachi) ಖಾಸಗಿ ಶಾಲೆಯ (School) ಪ್ರಾಂಶುಪಾಲನೊಬ್ಬನ್ನು (Principal) ಬಂಧಿಸಲಾಗಿದೆ. ಬಂಧಿತ ಆರೋಪಿ ಪ್ರಿನ್ಸಿಪಾಲ್ ಇರ್ಫಾನ್ ಗಫೂರ್ ಎಂದು ಗುರುತಿಸಲಾಗಿದೆ. ಆತನ ಮೊಬೈಲ್ನಿಂದ ಸುಮಾರು 25 ಸಣ್ಣ ವೀಡಿಯೋ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಾಗಿ ಪೊಲೀಸರು ಸಿಸಿಟಿವಿಯ ಡಿವಿಆರ್ ಅನ್ನು ಪರಿಶೀಲಿಸುತ್ತಿದ್ದಾರೆ.
ಇರ್ಫಾನ್ ಮತ್ತು ಶಾಲೆಯ ಶಿಕ್ಷಕಿಯ ವೀಡಿಯೋ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಬಂಧಿಸಿದ್ದಾರೆ. ಅಲ್ಲದೇ ಶಾಲೆಯನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಬ್ಲ್ಯಾಕ್ಮೇಲ್ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉದ್ಯೋಗ ನೀಡುವ ನೆಪದಲ್ಲಿ ಆರೋಪಿ ಶಿಕ್ಷಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ವೀಡಿಯೋ ಚಿತ್ರೀಕರಿಸುವ ಮೂಲಕ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ. ತನಿಖೆ ಪ್ರಗತಿಯಲ್ಲಿದ್ದು, ವೀಡಿಯೋ ಹೊಂದಿರುವವರನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.