ಉತ್ತರ ಕನ್ನಡದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿರುವ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 10 ಜನರ ಪೈಕಿ 7 ಜನರ ಶವಗಳನ್ನು ಈಗಾಗಲೇ ಹೊರತೆಗೆಯಲಾಗಿದೆ. ಉಳಿದವರ ಪತ್ತೆಗಾಗಿ ಜಂಟಿ ಕಾರ್ಯಾಚರಣೆ ಮುಂದುವರೆದಿದೆ.
ಇದರ ಬೆನ್ನಲ್ಲೇ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇರಳದ ಲಾರಿ ಚಾಲಕ ಅರ್ಜುನ್ ಅವರ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜುನ್ ಕೇರಳ ಮೂಲದ ಲಾರಿ ಚಾಲಕ. ಗುಡ್ಡ ಕುಸಿತ ಸ್ಥಳದಲ್ಲಿ ಅರ್ಜುನ್ ಲಾರಿ ಜಿಪಿಎಸ್ ಲೊಕೇಶನ್ ಪತ್ತೆಯಾಗಿದೆ.
ಆದರೆ, ಆತನನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ಅವೈಜ್ಞಾನಿಕವಾಗಿ ಹಾಗೂ ವಿಳಂಬವಾಗಿ ನಡೆಯುತ್ತಿದೆ ಎಂದು ಕುಟುಂಬ ಆರೋಪ ಮಾಡಿದೆ. ಇದರ ಬೆನ್ನಲ್ಲೊಯೇ ರಾಜ್ಯ ಸರ್ಕಾರದಿಂದ ಈ ಬಗ್ಗೆ ಹೈಕೋರ್ಟ್ ವರದಿ ಕೇಳಿದೆ. ಕೇಂದ್ರ ಸರಕಾರದಿಂದಲೂ ಪ್ರಕರಣ ಸಂಬಂಧ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಕೇಳಿರುವ ಮಾಹಿತಿ ಸಿಕ್ಕಿದೆ. ನಾಳೆ ಈ ಪ್ರಕರಣ ದಾವೆ ಸಂಬಂಧ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಶಿರೂರಿನಲ್ಲಿ ಕರ್ನಾಟಕ ಹಾಗೂ ಕೇರಳದಿಂದ ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಯುತ್ತಿದೆ. ಶಿರೂರಿನಲ್ಲಿ ಮಣ್ಣು ತೆರವು ಹಾಗೂ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. NDRF, SDRF, ಆರ್ಮಿ, ನೇವಿ, ಕೇರಳದ KRT ಹಾಗೂ ವಿಶೇಷ ತಜ್ಞರಿಂದ ಕಾರ್ಯಾಚರಣೆ ನಡೆಯುತ್ತಿದೆ. ರಸ್ತೆಯ ಮೇಲೆ ಬಿದ್ದಿರುವ ಎಲ್ಲಾ ಮಣ್ಣು ಶೇ. 70-80ರಷ್ಟು ತೆರವಾದ ಹಿನ್ನೆಲೆ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.