ಆಗ್ರಾ: ಕುಟುಂಬದೊಂದಿಗೆ ತಾಜ್ ಮಹಲ್ ವೀಕ್ಷಣೆಗೆ ಬಂದಿದ್ದ ವೇಳೆ ಹಿರಿಯ ನಾಗರಿಕರೊಬ್ಬರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರ ಜೊತೆ ಇದ್ದ ಪುತ್ರ ಸಿಪಿಆರ್ ಮಾಡಿ ತಂದೆಯನ್ನು ಉಳಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧರೊಬ್ಬರು ತಮ್ಮ ಕುಟುಂಬದೊಂದಿಗೆ ವಿಶ್ವ ಪ್ರಸಿದ್ಧ ಪ್ರೇಮ ಸೌಧ ತಾಜ್ ಮಹಲ್ ವೀಕ್ಷಣೆಗೆ ಆಗಮಿಸಿದ್ದರು.
ಅಲ್ಲಿ ತಾಜ್ ಮಹಲ್ ಕಟ್ಟಡದೊಳಗೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಮಗ ತಂದೆಗೆ ಪ್ರಥಮ ಚಿಕಿತ್ಸೆಯ ಭಾಗವಾಗಿ ಸಿಪಿಆರ್ ಮಾಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಇತರ ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಈ ದೃಶ್ಯ ವೈರಲ್ ಆಗಿದೆ. ಮಗ ಮಾಡಿದ ಸಿಪಿಆರ್ನಿಂದಾಗಿ ತಂದೆ (Father) ಸ್ವಲ್ಪ ಹೊತ್ತಿನಲ್ಲೇ ಎಚ್ಚರಗೊಂಡಿದ್ದು, ಕೂಡಲೇ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಿಪಿಆರ್ ಮಾಡಿದರೆ ವೈದ್ಯಕೀಯ ಪರಿಣಿತರು ರೋಗಿಯ ಸಹಾಯಕ್ಕೆ ಬರುವವರೆಗೂ ಅವರಲ್ಲಿ ರಕ್ತ ಸುಗಮವಾಗಿ ಚಲನೆಯಾಗುವಂತೆ ಮಾಡಬಹುದಾಗಿದೆ. ಪ್ರಥಮ ಚಿಕಿತ್ಸಾ ತರಬೇತಿ ಇಲ್ಲದ ಜನರು ಸಹ ಸಿಪಿಆರ್ ಮಾಡುವ ಮೂಲಕ ತುರ್ತು ವೈದ್ಯಕೀಯ ಅಗತ್ಯದ ಸ್ಥಿತಿಯಲ್ಲಿರುವ ಜನರ ಜೀವ ಉಳಿಸಿಕೊಳ್ಳಬಹುದಾಗಿದೆ. ಹೃದಯ ಬಡಿತ ಕಡಿಮೆಯಾಗಿ ಬಡಿತ ನಿಲ್ಲಿಸಿದ ಸಂದರ್ಭದಲ್ಲಿ ಈ ಸಿಪಿಆರ್ (CPR) ಮಾಡುವುದರಿಂದ ವ್ಯಕ್ತಿಯೂ ಬದುಕುಳಿಯುವ ಸಾಧ್ಯತೆ ಎರಡು ಮೂರು ಪಾಲು ಹೆಚ್ಚಿದೆ.