ಮಂಡ್ಯ: ಕನ್ನಂಬಾಡಿ ಅಣೆಕಟ್ಟು ಹಳೇ ಮೈಸೂರು ಭಾಗದ ಜೀವನಾಡಿ. ಡ್ಯಾಂ ಭರ್ತಿಯಾದ್ರೆ ಬೆಂಗಳೂರು ಸೇರಿದಂತೆ ಮೂರ್ನಾಲ್ಕು ಜಿಲ್ಲಯ ಜನರು ನೆಮ್ಮದಿಯಾಗಿರ್ತಾರೆ. ಆದ್ರೀಗ ಡ್ಯಾಂ ಬರಿದಾಗುತ್ತಿದ್ದು ಜೀವಜಲಕ್ಕೂ ಹಾಹಾಕಾರ ಎದುರಾಗುವ ಭೀತಿ ಶುರುವಾಗಿದೆ. ಮತ್ತೊಂದೆಡೆ ಬೆಳೆದಿರುವ ಬೆಳೆ ಎಲ್ಲಿ ಕೈಗೆ ಸಿಗೋದಿಲ್ವೊ ಎಂಬ ಆತಂಕ ಅನ್ನದಾತರನ್ನ ಆವರಿಸಿದೆ. ಹಾಗಿದ್ರೆ ಡ್ಯಾಂನಲ್ಲಿ ಸದ್ಯ ನೀರಿನ ಸಂಗ್ರಹ ಎಷ್ಟಿದೆ? ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದನ್ನ ತೋರಿಸ್ತೀವಿ ಈ ಸ್ಟೋರಿ ನೋಡಿ
ನಾಲ್ಕೈದು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ವರುಣನ ಆರ್ಭಟಕ್ಕೆ ಅವಾಂತರಗಳು ಸೃಷ್ಟಿಯಾಗಿವೆ. ರಾಜಧಾನಿಯ ಜನರಂತೂ ತತ್ತರಿಸಿಹೋಗುತ್ತಿದ್ದು, ಮಳೆಯ ನಡುವೆಯೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಬೆಂಗಳೂರಿಗರನ್ನ ಕಂಗೆಡುವಂತೆ ಮಾಡಿದೆ. ಹೌದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಭಾರೀ ಕುಸಿತವಾಗಿದ್ದು, ಜೂನ್ ಮೊದಲವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗದಿದ್ರೆ ಜಲ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
124.80 ಗರಿಷ್ಟ ಮಟ್ಟ ಹೊಂದಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಕಳೆದ ಐದುವರ್ಷದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ನೀರಿನ ಸಂಗ್ರಹ ಕುಸಿದಿದೆ. ಸದ್ಯ 82 ಅಡಿಗೆ ನೀರು ಕುಸಿದಿದ್ದು, ಕಳೆದ ವರ್ಷ ಇದೇ ದಿನ ಅಂದರೆ ಮೇ.24ರಂದು ಡ್ಯಾಂನಲ್ಲಿ 104 ಅಡಿ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ 22 ಅಡಿಯಷ್ಟು ನೀರಿನ ಪ್ರಮಾಣ ಕುಸಿದಿದೆ.
ಇನ್ನು ಟಿಎಂಸಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಕನ್ನಂಬಾಡಿ ಅಣೆಕಟ್ಟೆ 49.452 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 11.837 ಟಿಎಂಸಿ ಮಾತ್ರ ನೀಡಿದೆ. ಈಗಿರುವ 11.837 ಟಿಎಂಸಿ ನೀರಿನಲ್ಲಿ 7 ಟಿಎಂಸಿ ನೀರು ಡೆಟ್ ಸ್ಟೋರೇಜ್ ಆಗಿದ್ದು, ಜಲಚರಗಳ ರಕ್ಷಣೆ ಹಾಗೂ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಈ ನೀರನ್ನ ಡ್ಯಾಂನಲ್ಲೇ ಶೇಖರಿಸಿಕೊಳ್ಳಬೇಕಿದೆ. ಉಳಿಕೆ ಸುಮಾರು 4 ಟಿಎಂಸಿ ನೀರನ್ನ ಮಾತ್ರ ಬಳಕೆಗೆ ಅವಕಾಶವಿದ್ದು, 4 ಟಿಎಂಸಿಯಲ್ಲೇ ಬೆಳೆದಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ನೀರಿಗೆ ಕೊಡಬೇಕಿದೆ. ಈಗಿರುವ ಪರಿಸ್ಥಿತಿಯಲ್ಲಿ ಮುಂದಿನ ಒಂದುವಾರ ಮಾತ್ರ ಬೆಳೆಗಳಿಗೆ ನೀರು ಕೊಡಲು ಸಾಧ್ಯ. ಇನ್ನು ಬೆಂಗಳೂರು ಸೇರಿದಂತೆ ಕಾವೇರಿ ನೀರು ಅವಲಂಭಿಸಿರುವ ಮಂಡ್ಯ, ಮೈಸೂರು ಹಾಗೂ ರಾಮನಗರ ಭಾಗದ ಜನರಿಗೆ ಮುಂದಿನ ತಿಂಗಳು ಸಮಸ್ಯೆ ಎದುರಾಗಬಹುದು.
ಜೂನ್ ಮೊದಲವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಅವಮಾನ ಇಲಾಖೆ ತಿಳಿಸಿದೆ. ಜೂನ್ ಮೊದಲವಾರದಲ್ಲೇ ಮುಂಗಾರು ಪ್ರವೇಶ ಮಾಡಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ್ರೆ ನೀರಿನ ಸಮಸ್ಯೆ ದೂರವಾಗಲಿದೆ. ಇಲ್ಲವಾದ್ರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವ ಸಾಧ್ಯತೆದೆ. ಇನ್ನೊಂದೆಡೆ ಬೆಳೆದಿರುವ ಬೆಳೆ ಕೈಗೆ ಸಿಗುತ್ತೋ ಇಲ್ವೊ ಎಂಬ ಆತಂಕದಲ್ಲಿದ್ದು, ವರುಣನ ದೇವನ ಕೃಪೆಗಾಗಿ ಪ್ರಾರ್ಥಿಸುತ್ತಿದ್ದಾರೆ.