ಸದಾ ಒಂದಿಕ್ಕೊಂದು ವಿವಾದದ ಮೂಲಕವೇ ಸುದ್ದಿಯಾಗೋ ಆ ದಿನಗಳು ಖ್ಯಾತಿಯ ನಟ, ಸಾಮಾಜಿಕ ಹೋರಾಟಗಾರ ಚೇತನ್ ವಿರುದ್ಧ ಚಿತ್ರರಂಗ ಸಿಡಿದೆದ್ದಿದೆ. ಚಿತ್ರರಂಗದ ವಿರುದ್ಧ ಮಾತನಾಡುತ್ತಾ ಬಂದಿರುವ ಚೇತನ್ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದೆ.
ನಟ ಚೇತನ್ ಈಗಾಗಲೇ ಹಲವು ಬಾರಿ ಚಿತ್ರೋದ್ಯಮದ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿದ್ದು ಇಂದಿಗೂ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ ಅಂಬರೀಶ್ ಸ್ಮಾರಕ ವಿಚಾರವಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಚೇತನ್ ಈ ಹಿಂದೆ ಪುನೀತ್ ರಾಜ್ ಕುಮಾರ್ ಸ್ಮಾರಕ ವಿಚಾರವಾಗಿಯೂ ಮಾತನಾಡಿದ್ದರು.
ಕಲಾವಿದರ ಸಂಘ ಸೇರಿದಂತೆ ಹಲವು ಸಂಸ್ಥೆಗಳು ಚೇತನ್ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದು ಈ ಹಿನ್ನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಪದಾಧಿಕಾರಿಗಳು ಚೇತನ್ ವಿರುದ್ಧದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ. ಮಾ. ಹರೀಶ್ ಮಾತನಾಡಿ, ‘ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಟ್ಟು ಇತ್ತಿಚೆಗೆ ಉದ್ಘಾಟನೆ ಆಗಿದೆ. ಇದರ ವಿರುದ್ಧ ನಟ ಚೇತನ್ ಮಾತನಾಡಿದ್ದಾರೆ. ಉದ್ಘಾಟನೆ ಇಡೀ ಇಂಡಸ್ಟ್ರಿಯ ಒತ್ತಾಯ ಆಗಿತ್ತು. ಎಲ್ಲರೂ ಅದನ್ನು ಸುಲಲಿತವಾಗಿ ನಡೆಸಿಕೊಟ್ಟರು. ನಮ್ಮ ಕುಟುಂಬದಲ್ಲಿಯೇ ಆಗಾಗ ಗೊಂದಲ ಆಗುತ್ತೆ. ಚೇತನ್ ಮುಜುಗರವಾಗುವಂತ ಹೇಳಿಕೆ ನೀಡುತ್ತಾ ಇರುತ್ತಾರೆ. ಅಂಬರೀಶ್ ಅವರ ವಿಚಾರದಲ್ಲಿ ಸ್ಮಾರಕ ನಿರ್ಮಾಣ ಕುಟುಂಬದ ಒತ್ತಾಯ ಅಂತ ಚೇತನ್ ಆರೋಪ ಮಾಡ್ತಾರೆ. ಆದರೆ ಅದು ಕುಟುಂಬದ ಒತ್ತಾಯ ಅಲ್ಲ ಇಂಡಸ್ಟ್ರಿಯದ್ದು ಆಗಿತ್ತು ಎಂದು ಚೇತನ್ ಗೆ ಈ ಮೂಲಕ ಹೇಳಲು ಬಯಸುತ್ತೇನೆ. ಇದು ಸುಮಲತಾ ಒತ್ತಾಯ ಅಲ್ಲ’ ಎಂದರು.
ಉಮೇಶ್ ಬಣಕಾರ ಮಾತನಾಡಿ, ‘ನಮ್ಮ ಚಿತ್ರರಂಗದ ವಿಚಾರಕ್ಕೆ ಅಂಬರೀಶ್ ತುಂಬಾ ಸ್ಪಂದಿಸಿದ್ದಾರೆ. ನಮ್ಮ ಕುಟುಂಬದಲ್ಲಿಯೇ ಇದ್ದುಕೊಂಡು ಆರೋಪ ಮಾಡಿದರೆ ನೋವಾಗುತ್ತೆ. ಅಣ್ಣಾವ್ರದ್ದೇ ಆಗಲಿ, ಅಂಬರೀಶ್, ಅಪ್ಪು ಅವರದ್ದಾಗಲಿ ಕುಟುಂಬದವರ ಒತ್ತಾಯವಲ್ಲ. ಚೇತನ್ ಅವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಯಾರು ಕೇಳದೆ ಇದ್ದರು ಹೇಳಿಕೆ ಕೊಡುತ್ತಿದ್ದಾರೆ. ನಿನ್ನೆಯೆಲ್ಲಾ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಜೊತೆ, ಕಲಾವಿದರ ಸಂಘದಲ್ಲೂ ಚರ್ಚೆ ಮಾಡಿದ್ದೇವೆ. ಆತನೂ ನಮ್ಮ ಚಿತ್ರರಂಗದ ವ್ಯಕ್ತಿಯೇ. ಹೀಗಾಗಿ ತಿಳಿ ಹೇಳಿ ಎಂಬ ಮಾತುಗಳು ಕೇಳಿ ಬಂದಿದೆ. ಬುದ್ದಿ ಹೇಳಿದಾಗಲೂ ಸರಿ ಹೋಗಲಿಲ್ಲ ಎಂದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಡೀ ಇಂಡಸ್ಟ್ರಿ ಆತನ ವಿರುದ್ಧ ಅಸಹಕಾರದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಬೇಕು ಎಂದುಕೊಂಡಿದ್ದೇವೆ’ ಎಂದರು.
ಈ ಬಗ್ಗೆ ಚೇತನ್ ಅವರನ್ನು ಸಂಪರ್ಕಿಸಿ ಎಲ್ಲರೂ ಕೂತು ಅವರ ಜೊತೆ ಮಾತನಾಡುತ್ತೇವೆ. ಮಾತು ಕೇಳದೆ ಹೋದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಮತ್ತೆ ಕೂತು ತೀರ್ಮಾನ ಮಾಡುತ್ತೇವೆ. ಈ ಹಿಂದೆ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿದ್ರು. ಅದು ಕೋರ್ಟ್ ನಲ್ಲಿ ಸುಳ್ಳು ಆಗಿದೆ. ಅರ್ಜುನ್ ಸರ್ಜಾ ಪರ ಜಯ ಸಿಕ್ಕಿದೆ. ಅದರ ಹಿಂದೆ ಯಾರೆಲ್ಲ ಇದ್ದರೂ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ ಎನ್ನುವ ಮಾತುಗಳೂ ಕೂಡ ಸುದ್ದಿಗೋಷ್ಠಿಯಲ್ಲಿ ಕೇಳಿ ಬಂದವು.