ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಸದ್ಯದಲ್ಲೇ ತೆರೆ ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪರಿಷ್ಕರಣಾ ಸಮಿತಿ ಸೂಚಿಸಿದ ಬದಲಾವಣೆಗಳನ್ನು ಮಾಡಲು ಎಮರ್ಜೆನ್ಸಿ ಸಿನಿಮಾದ ನಿರ್ಮಾಣ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ತಂಡದವರು ಬಾಂಬೆ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಎಮರ್ಜೆನ್ಸಿ ತಂಡ ಕೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರ (ಅಕ್ಟೋಬರ್ 3) ಮುಂದಿನ ವಿಚಾರಣೆ ನಡೆಯಲಿದೆ.
ಸೆನ್ಸಾರ್ ಮಂಡಳಿಯವರು ‘ಎಮರ್ಜೆನ್ಸಿ’ ನೋಡಿ ನಂತರ ಅದನ್ನು ಪರಿಷ್ಕರಣಾ ಸಮಿತಿಗೆ ವರ್ಗಾಯಿಸಿತ್ತು. ಅವರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಲು ನಿರಕಾರಿಸಿದ್ದರು. ಜೊತೆಗೆ ಒಂದಷ್ಟು ಬದಲಾವಣೆ ಮಾಡಲು ಸೂಚನೆ ನೀಡಿದ್ದರು. ಆದರೆ, ಇದಕ್ಕೆ ತಂಡ ಸಿದ್ಧ ಇರಲಿಲ್ಲ. ಕೊನೆಗೆ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್ಗೆ ತಂಡದವರು ಮಾಹಿತಿ ನೀಡಿದ್ದು, ಬದಲಾವಣೆಗೆ ಒಪ್ಪಿರೋದಾಗಿ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಸಿನಿಮಾ ರಿಲೀಸ್ ದಿನಾಂಕ ವಿಳಂಬವಾಗಿದೆ. ಕೊನೆಗೂ ಸಿನಿಮಾ ರಿಲೀಸ್ ಆಗುತ್ತಿದೆ.
‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಅನೇಕರು ಆತಂಕ ಹೊರಹಾಕಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸಿಖ್ ಸಮುದಾಯದವರು ಅಪಸ್ವರ ತೆಗೆದಿದ್ದಾರೆ. ‘ಸಿಖ್ ಸಮುದಾಯದಯಕ್ಕೆ ಇರುವ ಗೌರವ ಚಿತ್ರದಲ್ಲಿ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಸಿಖ್ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ಸಿನಿಮಾ ಇದೆ. ಕಂಗನಾ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು ಜೊತೆಗೆ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಡೆ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.