ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಅಧಿಸೂಚನೆ ಹೊರಬೀಳಲು ಇನ್ನು ಕೇವಲ ನಾಲ್ಕು ದಿನವಷ್ಟೇ ಬಾಕಿ ಇದ್ದು. ಈ ಹೊತ್ತಲ್ಲಿ ರಾಜಕೀಯ ಚಟುವಟಿಕೆಗಳು ಚುರುಕು ಪಡೆದಿದೆ. ರಾಜ್ಯದಲ್ಲಿ ಹತ್ತಾರು ಸಭೆ ಮೂಲಕ ಸಿದ್ದ ಮಾಡಿದ್ದ ಸಂಭಾವ್ಯರ ಪಟ್ಟಿಯನ್ನು ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆ ಪರಿಶೀಲಿಸಿ, ಒಂದು ಅಂತಿಮ ಪಟ್ಟಿಯನ್ನು ಓಕೆ ಮಾಡಲಾಗಿದೆ.
ಶನಿವಾರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿತ್ತು. ಬಳಿಕ ಇಂದು ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಮೋದಿ ಸಮ್ಮುಖದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಇಂದು ಮಧ್ಯರಾತ್ರಿ ಅಥವಾ ನಾಳೆ ಬೆಳಗ್ಗೆ ಬಿಜೆಪಿಯ (BJP) ಮೊದಲ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಅಭ್ಯರ್ಥಿಗಳ ಆಯ್ಕೆಗೆ ಯಾವ ಮಾನದಂಡ ಬಳಸಲಾಗಿದೆ ಎನ್ನುವುದನ್ನು ರಹಸ್ಯವಾಗಿಯೇ ಇಡಲಾಗಿದೆ.
ಬಹುತೇಕರ ಪ್ರಕಾರ, ಗುಜರಾತ್ ಮಾಡೆಲ್ ಅನುಸರಿಸಲಾಗಿದೆಯಂತೆ. ಗುಜರಾತ್ ಮಾದರಿ ಎಂಬ ಸುದ್ದಿಯೇ ಹಲವರ ನಿದ್ದೆಗೆಡಿಸಿದೆ. ಯಾಕಂದ್ರೆ ಗುಜರಾತ್ನಲ್ಲಿ 30ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಸದ್ಯ ರಾಜ್ಯ ಬಿಜೆಪಿಯ 24ಕ್ಕೂ ಹೆಚ್ಚು ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಪಟ್ಟಿ ಪ್ರಕಟ ನಂತರ ಬಂಡಾಯ ಏಳದಂತೆ ಬಿಜೆಪಿ ಎಲ್ಲಾ ರೀತಿಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ ಎಂದು ಕೂಡ ಹೇಳಲಾಗುತ್ತಿದೆ.
85ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನೀಡ್ತಾರಾ?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮವಾಗಿದ್ದು, 85ಕ್ಕೂ ಹೆಚ್ಚು ಹಾಲಿ ಶಾಸಕರ ಕ್ಷೇತ್ರಗಳು ಕ್ಲಿಯರ್ ಆಗಿವೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಸಿಎಂ ಸೇರಿ ಬೊಮ್ಮಾಯಿ ಸಂಪುಟದ 21 ಸಚಿವರ ಕ್ಷೇತ್ರಗಳು ಕೂಡ ಚರ್ಚೆ ಇಲ್ಲದೇ ಕ್ಲಿಯರ್ ಆಗಿವೆ ಎನ್ನಲಾಗಿದೆ.
ಆ 21 ಸಚಿವರು ಯಾರು?
ಬಸವರಾಜ ಬೊಮ್ಮಾಯಿ- ಶಿಗ್ಗಾಂವಿ, ಗೋವಿಂದ ಕಾರಜೋಳ- ಮುಧೋಳ, ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ, ಅಶೋಕ್- ಪದ್ಮನಾಭನಗರ, ಶ್ರೀರಾಮುಲು- ಬಳ್ಳಾರಿ ಗ್ರಾಮೀಣ, ಡಾ.ಸಿ.ಅಶ್ವತ್ಥನಾರಾಯಣ್- ಮಲ್ಲೇಶ್ವರಂ, ಸಿ.ಸಿ.ಪಾಟೀಲ್- ನರಗುಂದ, ಮುರುಗೇಶ್ ನಿರಾಣಿ- ಬೀಳಗಿ, ಸುನೀಲ್ ಕುಮಾರ್- ಕಾರ್ಕಳ, ಬಿ.ಸಿ.ನಾಗೇಶ್- ತಿಪಟೂರು, ಶಂಕರಪಾಟೀಲ್ ಮುನೇನಕೊಪ್ಪ- ನವಲಗುಂದ, ಶಶಿಕಲಾ ಜೊಲ್ಲೆ- ನಿಪ್ಪಾಣಿ, ಪ್ರಭು ಚವ್ಹಾಣ್- ಔರಾದ್.
ವಲಸಿಗ ಸಚಿವರ ಕ್ಷೇತ್ರಗಳ ಕ್ಲಿಯರ್
ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ, ಆನಂದ್ ಸಿಂಗ್- ವಿಜಯನಗರ, ಮುನಿರತ್ನ- ರಾಜರಾಜೇಶ್ವರಿ ನಗರ, ಎಸ್.ಟಿ.ಸೋಮಶೇಖರ್- ಯಶವಂತಪುರ, ಬೈರತಿ ಬಸವರಾಜು- ಕೆ.ಆರ್.ಪುರಂ, ಗೋಪಾಲಯ್ಯ- ಮಹಾಲಕ್ಷ್ಮೀ ಲೇಔಟ್, ಶಿವರಾಂ ಹೆಬ್ಬಾರ್- ಯಲ್ಲಾಪುರ, ಬಿ.ಸಿ.ಪಾಟೀಲ್- ಹಿರೇಕೆರೂರು, ನಾರಾಯಣಗೌಡ- ಕೆ.ಆರ್.ಪೇಟೆ.
ಆದರೆ 5 ಸಚಿವರ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಸೋಮಣ್ಣ, ಹಾಲಪ್ಪ ಆಚಾರ್, ಆರಗ ಜ್ಞಾನೇಂದ್ರ, ಎಂ.ಟಿ.ಬಿ.ನಾಗರಾಜ್, ಅಂಗಾರ ಕ್ಷೇತ್ರಗಳ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಹಾಗಾದ್ರೆ ಆ ಐವರು ಸಚಿವರ ಕ್ಷೇತ್ರಗಳು ಅವರಿಗೆ ಉಳಿದುಕೊಳ್ಳುತ್ತಾ ಅಥವಾ ಕೆಲವರಿಗೆ ಸಿಗುವುದಿಲ್ಲವಾ ಎಂಬ ಪ್ರಶ್ನೆ ಉದ್ಭವಿಸಿದೆ.
ಗೋವಿಂದ ಕಾರಜೋಳ, ಈಶ್ವರಪ್ಪ, ಸೋಮಣ್ಣ ಹಾಗೂ ಜಗದೀಶ್ ಶೆಟ್ಟರ್ಗೂ ಟಿಕೆಟ್ ಪಕ್ಕಾ ಎನ್ನಲಾಗಿದೆ. ವಯಸ್ಸಿನ ಕಾರಣ ಕೆಲವರಿಗಷ್ಟೇ ಅನ್ವಯವಾಗುತ್ತೆ ಎಂದು ಅಮಿತ್ ಶಾ ಅವರು ಸಂದೇಶ ರವಾನಿಸಿದ್ದಾರೆ. ಆ ಮೂಲಕ ಘಟಾನುಘಟಿಗಳನ್ನ ಬದಿಗೆ ಸರಿಸದಿರಲು ಹೈಕಮಾಂಡ್ ನಿರ್ಧಾರಿಸಿದೆ ಎಂದು ಹೇಳಲಾಗಿದೆ.
ಇನ್ನೂ ಸಭೆಯಲ್ಲಿ ಆಪ್ತರೆಲ್ಲರ ಪರವೂ ಯಡಿಯೂರಪ್ಪ (BJP) ಬ್ಯಾಟಿಂಗ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಭೆಯಲ್ಲಿ ಬಿಎಸ್ವೈ ಹೆಚ್ಚು ಮಾತನಾಡಿದ್ದಾರೆ. ಪುತ್ರನ ಶಿಕಾರಿಪುರ ಸ್ಪರ್ಧೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸದೇ ಬಿಎಸ್ವೈ ಕುಳಿತಿದ್ದರು. ಈ ವೇಳೆ ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಪ್ರಸ್ತಾಪದ ಮಾಹಿತಿಯನ್ನು ಜೆ.ಪಿ.ನಡ್ಡಾ ಸಭೆ ಮುಂದಿಟ್ಟರು ಎಂದು ಮೂಲಗಳು ಹೇಳಿವೆ.