ಚಂಡೀಗಢ: ಮೂರು ವರ್ಷದವಳಿದ್ದಾಗ ಆಸಿಡ್ ದಾಳಿಯಿಂದ ಕಣ್ಣುಗಳನ್ನು ಕಳೆದುಕೊಂಡಿದ್ದ ಬಾಲಕಿಯೊಬ್ಬಳು, 10ನೇ ತರಗತಿ ಸಿಬಿಎಸ್ಇ (CBSE) ಪರೀಕ್ಷೆಯಲ್ಲಿ 95.02% ಅಂಕಗಳನ್ನು ಗಳಿಸುವ ಮೂಲಕ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾಳೆ. 15 ವರ್ಷದ ಕಾಫಿ (Kafi) ಎಂಬ ವಿದ್ಯಾರ್ಥಿನಿ ಈ ಸಾಧನೆಗೈದವಳು. ಬಾಲಕಿಯ ತಂದೆ ಸಂಸ್ಥೆ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಕಾಫಿ 3 ವರ್ಷದವಳಿದ್ದಾಗ ಪಕ್ಕದ ಮನೆಯವರು ಅಸೂಯೆಯಿಂದ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದರು. ನಂತರ ಆಕೆಯ ಸಂಪೂರ್ಣ ಮುಖವು ಸುಟ್ಟುಹೋಗಿತ್ತು. 6 ವರ್ಷಗಳ ನಂತರ ಅವಳು ಕಣ್ಣುಗಳನ್ನು ಕಳೆದುಕೊಂಡಿದ್ದಳು. ಬಳಿಕ ವಿದ್ಯಾರ್ಥಿನಿ ಬ್ರೈಲ್ ಲಿಪಿಯ ಮೂಲಕ ಅಧ್ಯಯನ ಆರಂಭಿಸಿದ್ದಳು. ಅಲ್ಲದೆ ತುಂಬ ವೇಗವಾಗಿ ಬ್ರೈಲ್ ಲಿಪಿ ಓದುವ ಕೌಶಲ್ಯ ಕರಗತ ಮಾಡಿಕೊಂಡಿದ್ದಳು.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಕಿ, ಭೂಗೋಳಶಾಸ್ತ್ರ (Geography) ನನ್ನ ನೆಚ್ಚಿನ ವಿಷಯವಾಗಿದೆ. ಮುಂದೆ ಐಎಎಸ್ (IAS) ಅಧಿಕಾರಿಯಾಗಲು ಬಯಸುತ್ತೇನೆ. ಅಲ್ಲದೆ ನನ್ನ ತಂದೆ ತಾಯಿಯ ಹೆಮ್ಮೆಯ ಮಗಳಾಗುತ್ತೇನೆ. ನಾನು ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಪೋಷಕರ ಹಾಗೂ ಶಿಕ್ಷಕರ ಬೆಂಬಲ ಬಹಳಷ್ಟಿದೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪರೀಕ್ಷೆಗಳಿಗೆ ತಯಾರಿ ನಡೆಸಲು ಯೂಟ್ಯೂಬ್ (YouTube) ಮತ್ತು ಇಂಟರ್ನೆಟ್ (Internet) ಮೂಲಗಳು ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾಳೆ.
ಮಗಳ ಸಾಧನೆಯ ಬಗ್ಗೆ ಕಾಫಿಯ ತಂದೆ ಮಾತನಾಡಿ, ನಾವು ಕಾಫಿ ಬಗ್ಗೆ ಹೆಮ್ಮೆಪಡುತ್ತೇವೆ. ಅವಳು ಮುಂದೆ ಏನಾಗಲೂ ಬಯಸುತ್ತಾಳೋ ಅದನ್ನು ಬೆಂಬಲಿಸುತ್ತೇವೆ. ಅವಳ ಕನಸುಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತೇವೆ. ಆಸಿಡ್ ದಾಳಿ ನಡೆದಾಗ ನನ್ನ ನೈತಿಕ ಸ್ಥೈರ್ಯ ಕುಂದಿತ್ತು. ಆದರೆ ಒಬ್ಬರ ಸಲಹೆ ಮೇರೆಗೆ ಮಗಳಿಗೆ ಶಿಕ್ಷಣ ನೀಡಲು ನಿರ್ಧರಿಸಿದೆ. ಈಗ ಕಾಫಿ ಆ ನಿರ್ಧಾರ ಸರಿ ಎಂದು ಸಾಬೀತುಪಡಿಸಿದ್ದಾಳೆ ಎಂದು ಸಂಭ್ರಮಿಸಿದ್ದಾರೆ.