ಮುಂಬೈ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೂ ಮೀರಿಸುವ ಘಟನೆ ಮುಂಬೈನ ಮೀರಾ ರೋಡ್ನಲ್ಲಿರುವ ಗೀತಾ ನಗರದಲ್ಲಿ ನಡೆದಿದೆ. ಲಿವ್- ಇನ್- ಪಾರ್ಟ್ನರ್ ನಲ್ಲಿದ್ದ ತನ್ನ ಗೆಳತಿಯನ್ನು ಹತ್ಯೆ ಮಾಡಿರುವ ಆರೋಪಿ 20 ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕುಕ್ಕರ್ (Cooker) ನಲ್ಲಿ ಬೇಯಿಸಿ ವಿಲೇವಾರಿ ಮಾಡುವ ಪ್ರಯತ್ನ ಮಾಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗೀತಾ ನಗರದ ಏಳನೇ ಹಂತದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ 56 ವರ್ಷದ ಮನೋಜ್ ಸಹಾನಿ ಎಂಬಾತನನ್ನು ನಯಾನಗರ ಪೊಲೀಸ್ ಠಾಣೆ (Nayanagar Police Station) ಯ ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಸಹಾನಿ (Manoj Sahni) ತನ್ನ ಗೆಳತಿ ಸರಸ್ವತಿ ವೈದ್ಯ ಜೊತೆಗೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್ನಲ್ಲಿರುವ ಗೀತಾ ನಗರ 7 ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ ಫ್ಲಾಟ್ 704 ರಲ್ಲಿ ವಾಸಿಸುತ್ತಿದ್ದರು. ಆಗ್ಗಾಗ್ಗೆ ನಡೆಯುತ್ತಿದ್ದ ಜಗಳ ತಾರಕಕ್ಕೇರಿ ಸರಸ್ವತಿಯನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಹೇಳಿದ್ದಾರೆ.
ಮರ ಕಡಿಯುವ ಯಂತ್ರ, ಪ್ಲಾಸ್ಟಿಕ್ ಚೀಲಗಳು ಪತ್ತೆ: ತನಿಖೆ ವೇಳೆ ಮಲಗುವ ಕೋಣೆಯಲ್ಲಿ ಕಪ್ಪು ಪ್ಲಾಸ್ಟಿಕ್ ಚೀಲಗಳು, ಏರ್ ಫ್ರೆಶ್ನರ್ (Air Freshener) ಜೊತೆಗೆ ಮಧ್ಯಮ ಗಾತ್ರದ ಮರ ಕತ್ತರಿಸುವ ಯಂತ್ರವೂ ಪತ್ತೆಯಾಗಿದೆ. ಮಹಿಳೆಯ ಕೂದಲನ್ನು ಮಲಗುವ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದು, ದುರ್ವಾಸನೆ ಹಿನ್ನೆಲೆ ಸ್ಥಳೀಯರ ಮಾಹಿತಿಯಂತೆ ಪರಿಶೀಲನೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಸಹಾನಿ ಮೂರ್ನಾಲ್ಕು ದಿನಗಳ ಹಿಂದೆ ಸರಸ್ವತಿ ವೈದ್ಯ (Saraswathi Vaidya) ಳನ್ನು ಕೊಂದು,
ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಲು ಮರ ಕಡಿಯುವ ಯಂತ್ರವನ್ನು ಖರೀದಿಸಿದ್ದಾನೆ. ಆಕೆಯ ದೇಹವನ್ನು 20 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಕೆಟ್ (Body In Bucket) ನಲ್ಲಿ ತುಂಬಿದ್ದಾನೆ. ವಾಸನೆ ನಿಯಂತ್ರಿಸಲು ಪ್ರೆಶರ್ ಕುಕ್ಕರ್ನಲ್ಲಿ ಕುದಿಸಿ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಹಾಕಿ ವಿಲೇವಾರಿ ಮಾಡಿದ್ದಾನೆ. ಇದೇ ವೇಳೆ ಮನೆಗೆ ಏರ್ ಫ್ರೇಶರ್ ಬಳಸಿ ವಾಸನೆ ನಿಯಂತ್ರಿಸುವ ಪ್ರಯತ್ನವೂ ಮಾಡಿದ್ದಾನೆ. ತನಿಖೆ ವೇಳೆ ಅಡುಗೆ ಮನೆಯಲ್ಲಿ ದೇಹದ ಹಲವು ತುಂಡುಗಳು ಪತ್ತೆಯಾಗಿದ್ದು ಇನ್ನು ಹಲವು ತುಂಡುಗಳು ನಾಪತ್ತೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.