ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಸರ್ಕಾರ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರುವ ಕುರಿತು ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯವಾಗಲಿದೆ.
ರಾಜ್ಯ ಸರ್ಕಾರದ ಆದೇಶದ ಅನ್ವಯ ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲಾಗುತ್ತದೆ.
ಈ ಹಳೆಯ ಪಿಂಚಣಿ ಯೋಜನೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೇಗೆ ಅನ್ವಯವಾಗಲಿದೆ?. ಈ ಕುರಿತು ಹಲವು ಗೊಂದಲವಿತ್ತು. ಈಗ ಜ್ಞಾಪನಾ ಪತ್ರದ ಮೂಲಕ ಈ ಕುರಿತು ಮಾಹಿತಿ ನೀಡಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಹೊಸ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ಒಳಪಡುವ ನೌಕರರು ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು. ಒಂದು ಬಾರಿ ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ. ಅರ್ಜಿ ಸಲ್ಲಿಕೆ ಮಾಡದೇ ಹೋದಲ್ಲಿ ಹೊಸ ಪಿಂಚಣಿ ಯೋಜನೆಯಲ್ಲಿಯೇ ಮುಂದುವರೆಯುತ್ತಾರೆ.
OPS ಯೋಜನೆ ಜಾರಿ, ನೌಕರರ ಗೊಂದಲಗಳು ಶಿಕ್ಷಕರಿಗೆ ಹೇಗೆ ಅನ್ವಯ?ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಪೈನ್ಸ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಸಂಬಂಧ ಕಾಲಮಿತಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಉಲ್ಲೇಖ-02 ರ ಸರ್ಕಾರದ ಆದೇಶದಂತೆ ಕ್ರಮವಹಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಉಲ್ಲೇಖ-01 ರಲ್ಲಿ ಮನವಿ ಸ್ವೀಕೃತಿಯಾಗಿರುತ್ತದೆ.ತತ್ಸಂಬಂಧ ಉಲ್ಲೇಖಿತ ಮನವಿಯನುಸಾರ ಉಲ್ಲೇಖ-02 ರ ಸರ್ಕಾರದ ಆದೇಶದಲ್ಲಿನ ಅಂಶಗಳನ್ನು ಪರಿಶೀಲಿಸಿಕೊಂಡು ಅರ್ಹವಾಗುವ ಶಿಕ್ಷಕರುಗಳ ಪಟ್ಟಿಯನ್ನು ಸರ್ಕಾರದ ಆದೇಶದಲ್ಲಿ ನಮೂದಿಸಿರುವ ನಮೂನೆಯಲ್ಲಿನ ಮಾಹಿತಿಗಳನ್ನು ದೃಢೀಕರಿಸಿಕೊಂಡು ತಮ್ಮ ದೃಡೀಕರಣದೊಂದಿಗೆ ತಮ್ಮ ಜಿಲ್ಲಾ ವ್ಯಾಪ್ತಿಯ ಶಿಕ್ಷಕರುಗಳ ಕ್ರೋಢೀಕರಣ ಮಾಹಿತಿಯನ್ನು ನಿಗಧಿತ ಕಾಲಮಿತಿಯೊಳಗೆ ಸಲ್ಲಿಸಲು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.