ಬೆಂಗಳೂರು ;– ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆ ಒಂದಾಗಿದೆ. ಜುಲೈ 1 ರಂದು ಅನ್ನಭಾಗ್ಯ ಯೋಜನೆ ಆರಂಭ ಮಾಡಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದೀಗ ಕೇಂದ್ರದಿಂದ ಅಕ್ಕಿ ಕೊಡಲು ನಿರಾಕರಿಸಲಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದಿದ್ದು, ಜುಲೈ ೧ಕ್ಕೆ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಲು ಸಿದ್ದು ಸರ್ಕಾರ ಪಣ ತೊಟ್ಟಿದೆ.
ಕೊಟ್ಟ ಮಾತಿನಂತೆ ನಾವು ನಡೆದುಕೊಳ್ಳಲೇಬೇಕು ಎಂದು ಕೈ ನಾಯಕರು ಹೇಳಿದ್ದು, ನೆರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಸರ್ಕಾರ ಕಸರತ್ತು ಮುಂದುವರೆಸಿದೆ. ಒಂದು ವೇಳೆ ನೆರೆ ರಾಜ್ಯಗಳಿಂದ ಅಕ್ಕಿ ಖರೀದಿ ಪ್ರಮಾಣ ಕಡಿಮೆಯಾದ್ರೆ ಓಪನ್ ಮಾರ್ಕೆಟ್ ಮೊರೆ ಹೋಗಲು ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಓಪನ್ ಮಾರ್ಕೆಟ್ ನಲ್ಲಿ ಲಭ್ಯ ಇರುವ ಅಕ್ಕಿ ಸಂಗ್ರಹ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಓಪನ್ ಮಾರ್ಕೆಟ್ ನಲ್ಲಿ ಕೆಜಿ ಅಕ್ಕಿಯ ಖರ್ಚು- ವೆಚ್ಚ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಮೂಲಕ ಜುಲೈ ೧ಕ್ಕೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಿದ್ದು ಸರ್ಕಾರ ಸರ್ಕಸ್ ಮಾಡುತ್ತಿದೆ.