ಚಿಕ್ಕಮಗಳೂರು: ಜಿಲ್ಲೆಯ ನಗರ ಕ್ಷೇತ್ರದಲ್ಲಿ 2004 ರಿಂದ ನಿರಂತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಐದನೇ ಬಾರಿ ಸೋಲು ಅನುಭವಿಸಿದರು. ಬಿಜೆಪಿ ಪಾಳಯದಿಂದಲೇ ರಾಜಕೀಯದ ಪಟ್ಟುಗಳನ್ನು ಅರಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ ತಮ್ಮಯ್ಯ ಸಿ.ಟಿ ರವಿ ಪಟ್ಟಿಗೆ, ಪ್ರತಿಪಟ್ಟು ನೀಡಿ ಗೆಲವಿನ ನಗೆ ಬೀರಿದರು. ಭಿನ್ನಾಭಿಪ್ರಾಯಗಳ ನಡುವೆಯೇ ಕೈ ಟಿಕೆಟ್ ಪಡೆದ ಎಚ್.ಡಿ ತಮ್ಮಯ್ಯ ಬಂಡಾಯ ಶಮನ ಮಾಡಿದ್ದು ಗೆಲುವುಗೆ ಪ್ರಮುಖ ಪಾತ್ರ ವಹಿಸಿತು.
ಕ್ಷೇತ್ರದಲ್ಲಿಈ ವರೆಗೆ ಬಿಜೆಪಿ ಪಾಲಾಗುತ್ತಿದ್ದ ಲಿಂಗಾಯತ ಮತಗಳನ್ನು ಕೈ ಅಭ್ಯರ್ಥಿ ಸೆಳೆದುಕೊಂಡಿದ್ದು ಬಿಜೆಪಿ ಸೋಲಿಗೆ ಕಾರಣವಾಯಿತು. ಅತಿಯಾದ ಆತ್ಮವಿಶ್ವಾಸ ಹಾಗೂ ಬಿಜೆಪಿ ಒಳಗಿನ ಆಂತರಿಕ ಬೇಗುದಿಯೂ ಸಹ ಸಿ.ಟಿ ರವಿಗೆ ದೊಡ್ಡ ಪೆಟ್ಟು ನೀಡಿರುವುದು ಫಲಿತಾಂಶದಲ್ಲಿ ಗೋಚರಿಸಿತು. ಹಿಂದಿನ ಬಿಜೆಪಿ ಸರಕಾರದ ಆಡಳಿಯ ವಿರೋಧಿ ಅಲೆಯೂ ಸಹ ಕ್ಷೇತ್ರದಲ್ಲಿ ಪರಿಣಾಮ ಬೀರಿದೆ. ಸಿದ್ದರಾಮಯ್ಯ, ಬಿ.ಎಸ್ ಯಡಿಯೂರಪ್ಪ, ಎಚ್.ಡಿ ದೇವೇಗೌಡ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಸಮುದಾಯಗಳ ಮೇಲೆ ಪರಿಣಾಮ ಬೀರಿದ್ದನ್ನು ಅಲ್ಲ ಗೆಳೆಯುವಂತಿಲ್ಲ. ಜತೆಗೆ ನಗರದ ಪ್ರದೇಶದಲ್ಲಿಅಮೃತ್ ಕುಡಿಯುವ ನೀರು ಯೋಜನೆ ಹಾಗೂ ಯುಜಿಡಿ ಯೋಜನೆಗಳು ವಿಫಲವಾಗಿದ್ದು ನಗರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನೆಡೆ ಉಂಟು ಮಾಡಿರುವುದನ್ನು ಉಲ್ಲೇಖಿಸಬಹುದು.
ಕಡೂರು- ಲೋಪಗಳ ಕೋಪಕ್ಕೆ ತುತ್ತಾದ ಬೆಳ್ಳಿ
ಬಿಜೆಪಿಯ ಆಡಳಿತ ವಿರೋಧಿ ಅಲೆ ಹಾಗೂ ಸಾಗುವಳಿ ಚೀಟಿ ವಿತರಣೆಯಲ್ಲಿ ನಡೆದ ಲೋಪವನ್ನು ಸಮರ್ಥಿಸಿಕೊಂಡಿದ್ದು ಕಡೂರಿನಲ್ಲಿ ಬಿಜೆಪಿಗೆ ಮುಳುವಾಗಿ ಮಾರ್ಪಟ್ಟಿತು.
2018ರಲ್ಲಿ ಮೊದಲ ಬಾರಿ ಗೆದ್ದರೂ ಸಹ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗದ್ದುಗೆ ಹಿಡಿದ ಬೆಳ್ಳಿ ಪ್ರಕಾಶ್ ಬೆಂಗಳೂರು ಸೇರಿದ್ದು, ಕ್ಷೇತ್ರದಲ್ಲಿಸ್ಥಳೀಯ ಮುಖಂಡರ ಆಡಳಿತ ಮಿತಿಮೀರಿದ್ದು, ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಬೆಳ್ಳಿ ಪ್ರಕಾಶ್ ಕ್ಷೇತ್ರದಲ್ಲಿಅಭಿವೃದ್ಧಿಗೆ ವಿಶೇಷ ಮುನ್ನುಡಿ ಬರೆದರೂ ಸಹ ಸಾರ್ವಜನಿಕರಿಂದ ಅಂತರ ಕಾಪಾಡಿಕೊಂಡಿದ್ದು ಹಿನ್ನೆಡೆಗೆ ಮತ್ತೊಂದು ಕಾರಣ. ವೈಎಸ್ವಿ ದತ್ತ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದು ಬಿಜೆಪಿಗೆ ನುಂಗಲಾರದ ತುತ್ತಾಯಿತು. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಆನಂದ್ ಅವರಿಗೆ 2018ರ ಸೋಲಿನ ಅನುಕಂಪದ ಅಲೆ ಹಾಗೂ ಕ್ಷೇತ್ರದಲ್ಲಿನ ಅಧಿಕಾರ ವಿರೋಧಿ ಅಲೆ ಕೈ ಹಿಡಿಯಿತು. ಇದರ ಜತೆಗೆ ಲಿಂಗಾಯತ, ಕುರುಬ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಜಾತಿ, ವರ್ಗದ ಜತೆಗೆ ಕೈ ಮುಖಂಡರು ಒಗ್ಗಟ್ಟಿನ ಜಪ ಪಟಿಸಿದ ಕಾರಣ ಹಾಗೂ ಕೊನೆ ಗಳಿಗೆಯಲ್ಲಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಚಾರದ ನಡೆಸಿದ್ದು ಕಾಂಗ್ರೆಸ್ ಅಭ್ಯರ್ಥಿ ಮೊದಲ ಗೆಲುವಿನ ನಗೆ ಬೀರಲು ಕಾರಣವಾಯಿತು. ವೈಎಸ್ವಿ ದತ್ತ ಅವರ ಪ್ರೀತಿಯ ರಾಜಕಾರಣ ಈ ಬಾರಿ ಕ್ಷೇತ್ರದಲ್ಲಿ ಕೈಕೊಟ್ಟಿದೆ.
ತರೀಕೆರೆ-ಮತ್ತೆ ದೋಸೆ ಮಗುಚಿದ ಮತದಾರ
ಸ್ಥಾನ ಪಲ್ಲಟ ಮಾಡುವುದು ಕ್ಷೇತ್ರದ ಮತದಾರನಿಗೆ ದೋಸೆ ತಿರುವಿ ಹಾಕಿದಷ್ಟೇ ಸಲೀಸು. ಅದೇ ರೀತಿ 2023ರ ಚುನಾವಣೆಯಲ್ಲೂ ಮತದಾರ ಪರ್ಯಾಯ ನಾಯಕತ್ವದ ಮೊರೆ ಹೋಗಿದ್ದಾನೆ. ಕೈಯೊಳಗಿನ ಬಂಡಾಯದ ಬಿಸಿಯಲ್ಲೂ ಬಿಜೆಪಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ಕೊನೆಗಳಿಗೆಯಲ್ಲಿ ಕಳೆದ ಚುನಾವಣೆಯಲ್ಲಿ ಸೋಲಿಗೆ ಕಾರಣವಾಗಿದ್ದ ಕುರುಬ ಸಮುದಾಯವನ್ನು ಒಗ್ಗೂಡಿಸಿದ್ದು, ಹಿಂದಿನ ಸರಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದಿದೆ. ಕಾಂಗ್ರೆಸ್ ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದು ಎಚ್.ಎಂ ಗೋಪಿಕೃಷ್ಣ 35465 ಮತಗಳನ್ನು ಪಡೆಯುವ ಮೂಲಕ ಸರಾಸರಿ ಈ ಹಿಂದಿನ ಚುನಾವಣೆಯಲ್ಲಿಪಡೆದಿದ್ದ ಮತಗಳನ್ನೇ ಕಾಯ್ದಿರಿಸಿಕೊಂಡಿದ್ದಾರೆ.
ಮೂಡಿಗೆರೆ-ಬಂಡಾಯದ ಬೇಗುದಿಯಲ್ಲಿ ಗೆಲುವಿನ ನಗು
ಏಕೈಕ ಮೀಸಲು ಕ್ಷೇತ್ರದಲ್ಲಿ ಬಂಡಾಯದ ಬೇಗುದಿಯಲ್ಲಿ ನಯನಾ ಮೋಟಮ್ಮ ಗೆದ್ದು ಬೀಗಿದ್ದಾರೆ. ಕಳೆದ ಎರಡು ಬಾರಿ ಸ್ಪರ್ಧಿಸಿದ್ದ ಮಾಜಿ ಸಚಿವೆ ಮೋಟಮ್ಮ ನಿರಂತರ ಸೋಲು ಅನುಭವಿಸಿದ್ದರು. ಈ ಬಾರಿ ಮಗಳಿಗೆ ಪಟ್ಟು ಹಿಡಿದು ಟಿಕೆಟ್ ಪಡೆದಿದ್ದರು. ಬಿಜೆಪಿ, ಜೆಡಿಎಸ್ ಒಳಗಿನ ಬಾರಿ ಬಂಡಾಯದ ಬೇಗುದಿ ಲಾಭ ಪಡೆದ ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ 50843 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ವಿರುದ್ಧ 722 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯೊಳಗಿನ ಬಂಡಾಯದಿಂದ ಟಿಕೆಟ್ ವಂಚಿತರಾಗಿದ್ದ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ತೆನೆಭಾರ ಹೊತ್ತಿದ್ದರು. ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಬಹುಸಂಖ್ಯಾತ ಒಕ್ಕಲಿಗರ ಮನಸೆಳೆಯುವ ಪ್ರಯತ್ನ ನಡೆಸಿದ್ದರೂ ಸಹ ಎಂಪಿಕೆ ವಿರೋಧಿ ಅಲೆ ಜೆಡಿಎಸ್ ಅನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಪಾಳಯಕ್ಕೆ ಬಂದ ಮಾಜಿ ಸಚಿವ ಬಿ.ಬಿ ನಿಂಗಯ್ಯ ಸಹ ಕೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಬಾರಿಯೂ ಕಡಿಮೆ ಅಂತರದಲ್ಲಿ ಗೆಲವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ ಈ ಬಾರಿಯೂ ಸಹ ಹಾವು-ಏಣಿ ಆಟದಲ್ಲಿ 201 ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಿ.ಎನ್ ಜೀವರಾಜ್ 58970 ಮತಗಳನ್ನು ಪಡೆದರೆ, ಟಿ.ಡಿ ರಾಜೇಗೌಡ 59171 ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಗೆದ್ದು ಬೀಗಿದರು. ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಎಸ್ ಶೆಟ್ಟಿ 19417 ಮತಗಳನ್ನು ಪಡೆದರು. ಕ್ಷೇತ್ರದಲ್ಲಿ ಕಳೆದ ಐದು ವರ್ಷದ ಅಭಿವೃದ್ಧಿ ಕಾರ್ಯ ಹಾಗೂ ಸಜ್ಜನಿಕೆ ರಾಜಕಾರಣ ಟಿ.ಡಿ ಆರ್ ಕೈ ಹಿಡಿದಿದೆ.