ಬೆಂಗಳೂರು: ರಾಜಧಾನಿಯ ಎದುರಾಗಿರುಗ ಭೀಕರ ಜಲಸಂಕಷ್ಟದಿಂದ ಜನ ಪರದಾಡ್ತಿದ್ದಾರೆ. ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಮೂಲೆ ಮೂಲೆಯಲ್ಲೂ ಜಲಕ್ಷಾಮ ತಾಂಡವವಾಡ್ತಿದೆ. ಇದೇ ಜಲಕಂಟಕದ ಎಫೆಕ್ಟ್ ಧೋಬಿ ಘಾಟ್ ಗಳ ಮೇಲೆ ತಟ್ಟಿದೆ. ಸಾವಿರಾರು ಕಾರ್ಮಿಕರ ದುಡಿಮೆಗೂ ಪೆಟ್ಟು ಬಿದ್ದಿದೆ
ಜೀವ ಜಲವಿಲ್ಲದೇ ಇಡೀ ಬೆಂಗಳೂರೇ ಬಾಯಾರಿದೆ. ವಾಟರ್ ಏಟಿಗೆ ಇಡೀ ಸಿಟಿ ತತ್ತರಿಸಿ ಹೋಗ್ತಿದೆ. ಇದರ ನಡುವೆ ಬೇಸಿಗೆ ಆರಂಭವಾಗುತ್ತಿದ್ದಂತೆ ಧೋಬಿಘಾಟ್ಗಳಲ್ಲಿ ನೀರಿನ ಕೊರತೆ ಶುರುವಾಗಿದೆ. ಇದರ ಎಫೆಕ್ಟ್ ನಿಂದ ಕಾರ್ಮಿಕರ ದುಡಿಮೆಗೂ ಪೆಟ್ಟು ಬಿದ್ದಿದೆ. ಬೋರ್ ವೆಲ್ ಗಳಲ್ಲಿ ನೀರು ಕಡಿಮೆಯಾಗಿ, ಬಟ್ಟೆ ಒಗೆಯಲು ಸಂಕಷ್ಟ ಎದುರಾಗಿದೆ. ದಿನಕ್ಕೆ ₹1,500ದಿಂದ ₹2,000 ದುಡಿಯುತ್ತಿದ್ದ ಕಾರ್ಮಿಕರು, ಇದೀಗ ₹500ಕ್ಕಿಂತಲೂ ಕಡಿಮೆ ದುಡಿಯುವಂತಾಗಿದೆ
ರಾಜಾಜಿನಗರ, ಮಲ್ಲೇಶ್ವರ, ಶ್ರೀನಗರ, ನಾಗರಭಾವಿ, ಲಗ್ಗೆರೆ ಸೇರಿದಂತೆ ಬೆಂಗಳೂರಿನ 30ಕ್ಕೂ ಹೆಚ್ಚು ಕಡೆಗಳಲ್ಲಿ ಧೋಬಿಘಾಟ್ಗಳಿವೆ. ಎಲ್ಲ ಕಡೆಯೂ ನೀರಿನ ಕೊರತೆ ಎದುರಾಗಿದೆ. ಪ್ರತಿ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಬಟ್ಟೆಗಳು ವಾಶ್ ಆಗ್ತಿದ್ದು, ಒಟ್ಟು 15 ಲಕ್ಷಕ್ಕೂ ಅಧಿಕ ಲೀಟರ್ ನೀರಿನ ಅಗತ್ಯತೆ ಇದೇ. ಆದರೆ ಈಗ ನೀರಿನ ಕೊರತೆಯಿಂದ ಕಾರ್ಮಿಕರಿಗೆ ಕೆಲಸ ಕಮ್ಮಿಯಾಗಿದೆ ದುಡಿಮೆಗೆ ಪೆಟ್ಟು ಬಿದ್ದಿದೆ. ಟ್ಯಾಂಕರ್ ನೀರು ಖರೀದಿಸಿ ಕೆಲಸ ಮಾಡುವಷ್ಟು ಆರ್ಥಿಕ ಶಕ್ತಿ ಕಾರ್ಮಿಕರಲ್ಲಿಲ್ಲದೆ ಸಂಕಷ್ಟ ಶುರುವಾಗಿದೆ.
ಇನ್ನೂ ಬೆಂಗಳೂರಿನ ಧೋಬಿಘಾಟ್ನಲ್ಲಿ ಹಲವಾರು ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಅದರಲ್ಲಿ ಕೆಲವು ಬಂದ್ ಆಗಿವೆ. ಮಿಕ್ಕಿದ್ರಲ್ಲಿ ಮಾತ್ರ ನೀರು ಇದೆ. ಹೀಗಾಗಿ ಇರುವ ನೀರನ್ನೇ ಬಳಸ್ತಿದ್ದಾರೆ, ಜೊತೆಗೆ ಸಂಸ್ಕರಿಸದ ನೀರನ್ನೂ ಮರುಬಳಕೆ ಮಾಡಿ ಬಟ್ಟೆ ವಾಷ್ ಮಾಡ್ತಿದ್ದಾರೆ. ನೀರಿನ ಕೊರತೆ ಆರಂಭವಾದಾಗಿನಿಂದ, ಬಟ್ಟೆ ಸ್ವಚ್ಛತೆ ಕೆಲಸ ಕಡಿಮೆಯಾಗಿದೆ. ಹೀಗಾಗಿ ನೀರಿನ ಲಭ್ಯತೆ ನೋಡಿಕೊಂಡು ಹಲವು ಧೋಭಿ ಶಿಪ್ಟ್ ಪ್ರಕಾರ ಕೆಲಸ ಮಾಡುತ್ತಿದ್ದಾರಂತೆ.
ಬೆಂಗಳೂರಿನಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೋಬಿಘಾಟ್ ಗಳಲ್ಲಿ ಮತ್ತಷ್ಟು ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ದೋಭಿ ಘಾಟ್ ಗಳಿಗೆ ಕಾಡ್ತಿವೆ.