ಬೆಂಗಳೂರು: ಸ್ಕೂಲ್, ಕಾಲೇಜುಗಳಲ್ಲಿ ಇತ್ತೀಚೆಗೆ ಹಿಡನ್ ಕ್ಯಾಮೆರಾ ಅಳವಡಿಸಿ, ಚಿತ್ರೀಕರಣ ಮಾಡಿರುವ ಬಗ್ಗೆ ಸುದ್ದಿಗಳು ಕೇಳುತ್ತಲೇ ಇದ್ದೇವೆ. ಇದೀಗ ಬೆಂಗಳೂರಿನ ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್ಬಾಯ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಯಲ್ಲಾಲಿಂಗ ಬಂಧಿತ ಆರೋಪಿ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.ಅಕ್ಟೋಬರ್ 31 ರಂದು ಬೆಳಗ್ಗೆ 8.20ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ವಾಶ್ರೂಂನ ಕಿಟಕಿಯ ಮೇಲೆ ಮೊಬೈಲ್ ಇರುವುದನ್ನು ಕಂಡರು. ಅದನ್ನು ಅನ್ಲಾಕ್ ಮಾಡಿದ ಬಳಿಕ ಹಲವು ರೆಕಾರ್ಡಿಂಗ್ಸ್ಗಳನ್ನು ನೋಡಿ ಗಾಬರಿಗೊಂಡಿದ್ದರು.
ಅವಳು ಹೊರಗೆ ಬಂದಾಗ ಯಲ್ಲಾಲಿಂಗ ಆ ಫೋನ್ ನನ್ನದು ನನಗೆ ವಾಪಸ್ ಕೊಡು ಎಂದು ಕೇಳಿದ್ದಾನೆ, ಆದರೆ ಸಿಬ್ಬಂದಿ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಿಲಕನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಕಾಯ್ದೆಯ ಸೆಕ್ಷನ್ 77 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಕೇಳಿದಾಗ ತಪ್ಪಾಗಿ ತನ್ನ ಮೊಬೈಲ್ನ್ನು ವಾಶ್ರೂಂನಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ. ಆದರೆ ಅಲ್ಲಿರುವ ರೆಕಾರ್ಡಿಂಗ್ಗಳು ವಿಭಿನ್ನ ಕಥೆಯನ್ನೇ ಹೇಳುತ್ತಿವೆ. ಯಲ್ಲಾಲಿಂಗ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.