ನವದೆಹಲಿ: 40 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಹೊಡೆದು ಸಾಯಿಸಿದ್ದು, ನಂತರ ಆಕೆಯ ದೇಹವನ್ನು ಎರಡು ಭಾಗ ಮಾಡಿ ರುಂಡವನ್ನು ಹಾಸಿಗೆಯ ಕೆಳೆಗೆ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದೆಹಲಿಯ ಮಧು ವಿಹಾರ್ನಲ್ಲಿ ಈ ಘಟನೆ ನಡೆದಿದೆ. ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸುಬೋಧ್ನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಹೆಂಡತಿ ಮನಿಷಾ(35) ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕಿಸಿ ಆಕೆಯಿಂದ ಸತ್ಯ ಬಾಯ್ಬಿಡಿಸಲು ರಾತ್ರಿ ಹೊಡೆದಿದ್ದಾಗಿ ಸುಬೋಧ್ ಪೊಲೀಸರಿಗೆ ಹೇಳಿದ್ದಾನೆ.
ಗಂಡನ ಹಲ್ಲೆಯಿಂದಾಗಿ ಮನಿಷಾ ಸಾವನ್ನಪ್ಪಿದ್ದು, ಆರೋಪಿ ಆಕೆಯ ರುಂಡವನ್ನು ಗರಗಸದಿಂದ ಕತ್ತರಿಸಿ, ಒಂದು ಬ್ಯಾಗ್ನಲ್ಲಿ ರುಂಡವನ್ನಿಟ್ಟು ಹಾಸಿಗೆಯ ಕೆಳಗೆ ಬೆಡ್ ಬಾಕ್ಸ್ನಲ್ಲಿ ಬಚ್ಚಿಟ್ಟಿದ್ದ. ಅಲ್ಲದೆ ಉಳಿದ ದೇಹದ ಭಾಗಗಳನ್ನು ಕತ್ತರಿಸಿ ಬಿಸಾಡಬೇಕೆಂದುಕೊಂಡಿದ್ದ. ಆದರೆ ಪೊಲೀಸರು ಸುಬೋಧ್ನನ್ನು ಬಂಧಿಸಿದ್ದಾರೆ.2ನೇ ಹೆಂಡತಿಯ ಮುಂದೆಯೇ ಹೊಡೆದ: ಸುಬೋಧ್ ತನ್ನ ಮೊದಲ ಪತ್ನಿ ಮನಿಷಾಳನ್ನು ಎರಡನೇ ಪತ್ನಿ ಮುನಿಯಾ, ಆಕೆಯ ಎರಡು ತಿಂಗಳ ಮಗು ಹಾಗೂ ತನ್ನ ಇನ್ನಿಬ್ಬರು ಮಕ್ಕಳ ಮುಂದೆಯೇ ಹೊಡೆದಿದ್ದಾಗಿ ಹೇಳಿದ್ದಾನೆ. ಮನೀಷಾ ತನ್ನ ಇಬ್ಬರು ಮಕ್ಕಳೊಂದಿಗೆ ಶಾಖುರ್ಪುರ್ನಲ್ಲಿ ವಾಸವಿದ್ದು, ಸುಬೋಧ್ ಎರಡನೇ ಪತ್ನಿ ಮುನಿಯಾ ಹಾಗೂ ಮಗುವಿನ ಜೊತೆ ಮಧು ವಿಹಾರ್ನಲ್ಲಿ ವಾಸವಿದ್ದ. ಸುಬೋಧ್, ಏನೋ ಮಾತಾಡಬೇಕು ಎಂದು ಹೇಳಿ ಮನೀಷಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ.
ಸುಬೋಧ್ ಹುಚ್ಚನಂತೆ ವರ್ತಿಸುತ್ತಿದ್ದ. ರಾತ್ರಿ ಲಾಠಿಯಿಂದ ಮನಿಷಾಳನ್ನು ಹೊಡೆದಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ. ಈ ವೇಳೆ ಎರಡನೇ ಪತ್ನಿ ಮುನಿಯಾ ಮತ್ತು ಮಕ್ಕಳು ಮಧ್ಯಪ್ರವೇಶಿಸಲು ಯತ್ನಿಸಿದಾಗ ಅವರನ್ನೂ ಬೆದರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆತ ಕೋಪದಿಂದ ಹೆಂಡತಿಯನ್ನು ಹೊಡೆದಿದ್ದಾಗಿ ಹೇಳಿದ್ದಾನಾದ್ರೂ ಮೊದಲೇ ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿದ್ದ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ ಆತ ಮನಿಷಾಳನ್ನು ತನ್ನ ಮನೆಗೆ ಕರೆಸಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ.
ರಾತ್ರಿ ಮನಿಷಾಳ ಮೇಲೆ ಸುಬೋಧ್ ಹಲ್ಲೆ ಮಾಡಿದ್ದರಿಂದ ಆಕೆಗೆ ಜ್ವರ ಬಂದಿತ್ತು. ನಂತರ ಆಕೆಗೆ ಚಿಕಿತ್ಸೆ ಕೊಡಿಸಿದ್ದ. ಆದರೆ ಮತ್ತೆ ಆಕೆಯನ್ನು ಹೊಡೆಯಲು ಶುರು ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಮನೀಷಾ ಗಂಡನ ಕಿರುಕುಳದಿಂದ ನರಳಿ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ದೇಹವನ್ನು ಹೇಗಾದ್ರೂ ಹೊರಗೆ ಸಾಗಿಸಬೇಕು ಎಂದು ಯೋಚಿಸಿ ಆತ ಪ್ಲಂಬಿಂಗ್ಗೆ ಬಳಸುತ್ತಿದ್ದ ಗರಗಸದಿಂದ ತಲೆಯನ್ನು ಕತ್ತರಿಸಿದ್ದ. ಉಳಿದ ದೇಹದ ಭಾಗವನ್ನೂ ಕತ್ತರಿಸಬೇಕೆಂದಿದ್ದ. ಆದರೆ ದೇಹದಿಂದ ದುರ್ವಾಸನೆ ಬರಲು ಶುರುವಾದಾಗ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ ಮೇಲೆ ಮನೀಷಾಳ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಮುಮದುವರೆಸಿದ್ದೇವೆ ಎಂದು ಪೊಲೀಸರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.