ಅಕ್ಟೋಬರ್ 7ರಂದು ಬೈರುತ್ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಸಂಘಟನೆಯ ಹಿರಿಯ ಕಮಾಂಡರ್ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿದೆ.
ದಾಳಿಯಲ್ಲಿ ಹಿಜ್ಬೊಲ್ಲಾ ಬಂಡುಕೋರ ಸಂಘಟನೆಯ ಲಾಜಿಸ್ಟಿಕ್ಸ್, ಬಜೆಟ್ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದ್ದ ಸುಹೇಲ್ ಹುಸೇನಿ ಹತ್ಯೆಯಾಗಿರುವುದಾಗಿ ಇಸ್ರೇಲ್ ಮಿಲಿಟರಿ ತಿಳಿಸಿದೆ. ಆದ್ರೆ ಘಟನೆಯ ಬಗ್ಗೆ ಹಿಜ್ಬೊಲ್ಲಾದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಹುಸೇನಿ ಇರಾನ್ನಿಂದ ಸುಧಾರಿತ ಶಸ್ತ್ರಾಸ್ತ್ರಗಳನ್ನು ವರ್ಗಾಯಿಸುವಲ್ಲಿ ಮತ್ತು ಅವುಗಳನ್ನು ವಿವಿಧ ಹಿಜ್ಬುಲ್ಲಾ ಘಟಕಗಳಲ್ಲಿ ವಿತರಿಸುವಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಅವರ ಗುಂಪಿನ ಮಿಲಿಟರಿ ಕೌನ್ಸಿಲ್ನ ಸದಸ್ಯರಾಗಿದ್ದರು ಎಂದು ಮಿಲಿಟರಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಲವಾರು ಉನ್ನತ ಮಟ್ಟದ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ. ಕಳೆದ ವಾರ ಇಸ್ರೇಲ್ ದಕ್ಷಿಣ ಲೆಬನಾನ್ಗೆ ಸೀಮಿತ ಎಂದು ಹೇಳಿ ದಾಳಿಯನ್ನು ಆರಂಭಿಸಿತ್ತು.
ಇಸ್ರೇಲ್ ಹಾಗೂ ಇರಾನ್ ಯುದ್ಧ ಆರಂಭವಾಗಿ ವರ್ಷ ಕಳೆದಿದೆ. ಘಟನೆಯಲ್ಲಿ ಹಲವಾರು ಅಮಾಯಕ ಜೀವಗಳು ಪ್ರಾಣಕಳೆದುಕೊಂಡಿದ್ದಾರೆ. ಜೊತೆಗೆ ಹೆಜ್ಬುಲ್ಲಾ ಸಂಘಟನೆಯ ಸಾಕಷ್ಟು ನಾಯಕರು ಬಲಿಯಾಗಿದ್ದಾರೆ. ಗಾಜಾ ಪಟ್ಟಿಯಲ್ಲಿ ಕದನ ವಿರಾಮದವರೆಗೆ ಇಸ್ರೇಲ್ ಮೇಲೆ ರಾಕೆಟ್, ಕ್ಷಿಪಣಿ ಮತ್ತು ಡ್ರೋನ್ ದಾಳಿ ಮಾಡುವುದಾಗಿ ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ.