ದೇವೇಂದ್ರಪ್ಪ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ಕಷ್ಟಗಳನ್ನು ಹಾಸುಹೊದ್ದು ಮಲಗಿದವರು. ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದಾರೆ. 30 ವರ್ಷಗಳ ಕಾಲ ಸಂಸ್ಥೆಯಲ್ಲಿ ಜವಾನನಾಗಿ ಕೆಲಸ ಮಾಡಿರುವ ಇವರು ಇಡೀ ಜಗಳೂರು ತಾಲೂಕಿಗೆ ಚಿರಪರಿಚಿತರು.ಜವಾನ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಚುನಾವಣಾ ಕಣಕ್ಕಿಳಿದ ದೇವೇಂದ್ರಪ್ಪ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಛಲಬಿಡದೇ ಜೆಡಿಎಸ್ ತೊರೆದು ಕಾಂಗ್ರೆಸ್ ಕೈ ಹಿಡಿದು ಟಿಕೆಟ್ ಆಕಾಂಕ್ಷಿಯಾಗಿದ್ದರು. ಮೊದಲ ಬಾರಿಗೆ ಕಾಂಗ್ರೆಸ್ನಿಂದ ಹಾಗು ಡಿಕೆಶಿ ಕೃಪಾಕಟಾಕ್ಷದಿಂದ ಟಿಕೆಟ್ ಕೂಡ ದಕ್ಕಿಸಿಕೊಂಡ ಇವರು ಕೇವಲ 800 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಜಗಳೂರು ಶಾಸಕರಾಗಿ ಆಯ್ಕೆಯಾದರೂ ದೇವೇಂದ್ರಪ್ಪ ತನಗೆ 30 ವರ್ಷಗಳಿಂದ ಅನ್ನ ನೀಡಿದ್ದ ಜವಾನ ವೃತ್ತಿಯನ್ನು ನೆನೆದು ಕೆಲಕಾಲ ತಾವು ದುಡಿದ ಕಾಲೇಜಿನಲ್ಲಿ ಸಂಬಳರಹಿತ ಕೆಲಸ ಮಾಡಿದರು.
ನಾನು ರೌಡಿಯಲ್ಲ ಜನಸೇವಕ
‘‘ಚುನಾವಣೆಯಲ್ಲಿ ಸಂದರ್ಭದಲ್ಲಿ ನನ್ನನ್ನು ರೌಡಿ ಎಂದು ಕೆಲವರು ಅಪಪ್ರಚಾರ ಮಾಡಿದರು. ನಾನು ರೌಡಿಯಾಗಿದ್ದರೆ ನನ್ನನ್ನು ಜನ ಗೆಲ್ಲಿಸುತ್ತಿದ್ದರೇ ಎಂದು ಪ್ರಶ್ನಿಸಿದ ಅವರು, ಜನ ಸೇವೆಯೇ ಜನಾರ್ಧನನ ಸೇವೆ ಎಂದು ನಂಬಿದ್ದೇನೆ. ರೌಡಿ ಎಂದು ಬಿಂಬಿಸಿದ ಅನೇಕರಿಗೆ ಇದು ಅರ್ಥವಾಗಲಿ. ನನಗೆ ಜನಪ್ರಿಯ ಶಾಸಕ ಎಂಬ ಬಿರುದು ಬೇಡ. ಐದು ವರ್ಷ ಪೂರೈಸಿದ ನಂತರ ಕೆಲಸ ನೋಡಿ ಮಾತನಾಡಿ’’ ಎಂದು ಶಾಸಕ ದೇವೇಂದ್ರಪ್ಪ ವಿರೋಧಿಗಳಿಗೆ ಚಾಟಿ ಬೀಸಿದರು.
ಕ್ಷೇತ್ರದ ಕಸ ಗುಡಿಸುವೆ
‘‘ಕ್ಷೇತ್ರದ ಅಭಿವೃದ್ಧಿಗೆ ಮುಲಾಜಿಲ್ಲದೆ, ಮರ್ಜಿಗೆ ಒಳಗಾಗದೇ ಅಧಿಕಾರಿಗಳಿಂದ ಕೆಲಸ ಮಾಡಿಸುವೆ. ಜನ ನನಗೆ ಕ್ಷೇತ್ರದ ಕಸ ಗುಡಿಸುವ ಅವಕಾಶ ಕೊಟ್ಟಿದ್ದಾರೆ. ನಾನು ಮಲಗಲ್ಲ, ಅಧಿಕಾರಿಗಳನ್ನು ಕಚೇರಿಯಲ್ಲಿ ಮಲಗಲು ಬಿಡಲ್ಲ. ಅಧಿಕಾರಿಗಳು ಹೃದಯ ತುಂಬಿ ಕೆಲಸ ಮಾಡಬೇಕು. ಭಯ ಮುಕ್ತ ಆಡಳಿತ ನೀಡಿ, ಸರಕಾರದ ಸವಲತ್ತುಗಳನ್ನು ಜನತೆಗೆ ತಲುಪಿಸುತ್ತೇನೆ’’ ಎಂದು ದೇವೇಂದ್ರಪ್ಪ ಹೇಳಿದರು.