ಹಾವೇರಿ ;– ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಶತಸಿದ್ಧ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಹಾವೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ ಹಿಂದೂ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೋ ಅಲ್ಲಿ ಮುಂದೊಂದು ದಿನ ದೇವಾಲಯ ನಿರ್ಮಿಸುತ್ತೇವೆ. 5 ವರ್ಷ ಆಗಬಹುದು, 50 ವರ್ಷವಾಗಬಹದು, ಅದನ್ನು ಮಾಡಿಯೇ ತೀರುತ್ತೇವೆ ಎಂದರು.
ಕಾಂಗ್ರೆಸ್ನವರಿಗೆ ಮುಸ್ಲಿಮರನ್ನು ಸಂತೃಪ್ತಿಪಡಿಸುವುದೆ ಕೆಲಸ. ಮುಸ್ಲಿಮರು ಇಲ್ಲದಿದ್ದರೆ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿತ್ತು. ಅವರು ಇರುವುದರಿಂದ ಇನ್ನೂ ಜೀವಿಸುತ್ತಿದೆ. ಅದಕ್ಕಾಗಿ ಸುಮ್ಮನೆ ಇದನ್ನು ಸೃಷ್ಟಿಸಿದ್ದಾರೆ ಎಂದರು.
ಕಾಂಗ್ರೆಸ್ನವರಿಗೆ ಆರ್ಟಿಕಲ್ 370 ರದ್ದುಗೊಳ್ಳಬಾರದಿತ್ತು. ರದ್ದಾಗಿ ಅದು ಅವರಿಗೆ ನಿರಾಶೆಯಾಗಿದೆ. ಅಯೋಧ್ಯೆ ರೀತಿಯಲ್ಲಿಯೇ ಕಾಶಿ ವಿಶ್ವನಾಥ ದೇವಾಲಯದ ಬಗ್ಗೆ ಕೂಡಾ ತೀರ್ಪು ಬರಲಿದೆ. ಇದರ ಜತೆಗೆ ದೇಶದಲ್ಲಿ ಎಲ್ಲೆಲ್ಲಿ ಹಿಂದೂ ದೇವಾಲಯ ನಾಶ ಮಾಡಿ ಮಸೀದಿ ಕಟ್ಟಿದ್ದಾರೋ ಆ ಮಸೀದಿ ಕೆಡವಿ ಮತ್ತೆ ಹಿಂದೂ ದೇವಾಲಯ ನಿರ್ಮಾಣವಾಗಲಿವೆ. ಭಾರತೀಯ ಸಂಸ್ಕೃತಿ ಮರು ನಿರ್ಮಿಸಲು ಬಿಜೆಪಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.