ಕೋಲ್ಕತ್ತಾ: ಸಾಕಷ್ಟು ವಿವಾದದ ಮೂಲಕವೇ ತೆರೆಗೆ ಬಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಪ್ರದರ್ಶನವನ್ನು ಪಶ್ಚಿಮ ಬಂಗಾಳ ಸರ್ಕಾರ ನಿಷೇಧಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿವಾದಾತ್ಮಕ ಚಿತ್ರದ ಪದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶ ಹೊರಡಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ
ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರವು ಕೇರಳ ಸ್ಟೋರಿ ಚಲನಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಮುಖ್ಯ ಭೂಮಿಕೆ ಕಾಣಿಸಿಕೊಂಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದ್ದು ಇದೇ ಕಾರಣಕ್ಕೆ ಸಿನಿಮಾ ಸಾಕಷ್ಟು ವಿವಾದ ಹುಟ್ಟುಹಾಕಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾದ ಟೀಸರ್ ರಿಲೀಸ್ ಆದಾಗಲೇ ವಿವಾದ ಶುರುವಾಗಿತ್ತು. ಟ್ರೇಲರ್ ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ಗೆ ಕೇರಳ ಸರ್ಕಾರ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಮೇ 5ರಂದು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಿಡುಗಡೆಯಾದ ಮೂರೇ ದಿನಕ್ಕೆ 35ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿದೆ.