ಇಂದು ವ್ಯಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದೆ. ರಿಂಕು ಸಿಂಗ್ ಬ್ಯಾಟಿಂಗ್ ಕ್ರಮಾಂಕ ಹಾಗೂ ಅವರ ಪಾತ್ರದ ಬಗ್ಗೆ ಹೆಚ್ಚು ಸ್ಪಷ್ಟನೆ ಸಿಗಬೇಕಿದೆ. ಭಾರತ ಟಿ20 ತಂಡದಲ್ಲಿ ಬಹುಕಾಲ ಉಳಿಯಬಲ್ಲ ಆಟಗಾರ ಎಂದು ಗುರುತಿಸಿಕೊಂಡಿರುವ ರಿಂಕು, ಮೊದಲೆರಡು ಪಂದ್ಯಗಳಲ್ಲಿ 6ನೇ ಹಾಗೂ ಕಳೆದ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು.
3 ಇನ್ನಿಂಗ್ಸ್ಗಳಿಂದ ಕೇವಲ 28 ರನ್ ಗಳಿಸಲು ರಿಂಕು, 34 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಅಂಶ ತಂಡದ ಆಡಳಿತವನ್ನು ಗೊಂದಲಕ್ಕೆ ಸಿಲುಕಿಸಬಹುದು. ಜೊತೆಗೆ ರಿಂಕುರ ಮನದಲ್ಲೂ ಆತಂಕ ಮೂಡಿಸಿರಬಹುದು. ಈ ಪಂದ್ಯದಲ್ಲಿ ಅವರ ಬ್ಯಾಟ್ನಿಂದ ಸ್ಫೋಟಕ ಇನ್ನಿಂಗ್ಸ್ ಮೂಡಿಬರಬಹುದೇ ಎನ್ನುವ ಕುತೂಹಲವಿದೆ.
ಮತ್ತೊಂದೆಡೆ, ಬೌಲರ್ಗಳು ಸುಧಾರಿತ ಪ್ರದರ್ಶನ ತೋರಿದರೆ ಸರಣಿ ಗೆಲುವಿನ ಹಾದಿ ಸುಗಮಗೊಳ್ಳಬಹುದು. ಅರ್ಶದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಇನ್ನು, ಅವಕಾಶಕ್ಕಾಗಿ ಕಾಯುತ್ತಿರುವ ವೇಗಿಗಳಾದ ವೈಶಾಖ್ ವಿಜಯ್ ಕುಮಾರ್ ಹಾಗೂ ಯಶ್ ದಯಾಳ್ಗೆ ಭಾರತ ತಂಡದ ಕ್ಯಾಪ್ ದೊರೆಯುತ್ತಾ ಎನ್ನುವುದನ್ನು ಕಾದು ನೋಡಬೇಕು.
ಆತಿಥೇಯ ದಕ್ಷಿಣ ಆಫ್ರಿಕಾ, ಭಾರತೀಯ ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಡುತ್ತಿದೆ. ಸದ್ಯ ಸರಣಿಯಲ್ಲಿ ಆಡುತ್ತಿರುವ ಹಲವು ಆಟಗಾರರು 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ, ಈ ಸರಣಿ ಅವರಿಗೆಲ್ಲ ಉತ್ತಮ ಪಾಠವಾಗಲಿದೆ. ಸದ್ಯಕ್ಕೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದ ಪಾರಾಗುವುದು ಹರಿಣ ಪಡೆಯ ಮುಂದಿರುವ ಬಹುದೊಡ್ಡ ಗುರಿ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಸಂಜು ಸ್ಯಾಮನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣ್ ದೀಪ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ರಿಕಲ್ಟನ್, ರೀಜಾ ಹೆಂಡ್ರಿಕ್ಟ್, ಏಯ್ಡನ್ ಮಾರ್ಕರಮ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಗೆರಾಲ್ಡ್ ಕೋಟ್ಜಿ/ ಎನ್ಕಾಬಾಯೋಮಿ ಪೀಟ, ಸಿಮಿಲಾನೆ, ಕೇಶವ್ ಮಹರಾಜ್, ಸಿಪಾಮ್ಹಾ.
ಪಂದ್ಯ: ಸಂಜೆ. 8:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ