ಹನೂರು ; ಹೆಣ್ಣು ಮಕ್ಕಳು ಅಂದರೆ ತಂದೆಗೆ ಇನ್ನಿಲ್ಲದ ಪ್ರೀತಿ. ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ತಂದೆ ಎಂದರೆ ಅಪಾರ ಪ್ರೀತಿ ಗೌರವ.
ಮಗಳ ಸೂಪರ್ ಹೀರೋ ತಂದೆ ಅಂದರೆ ತಪ್ಪಾಗಲ್ಲ. ಹೌದು ಇಲ್ಲೊಬ್ಬ ತಂದೆ ತನ್ನ ಮಗಳಿಗೋಸ್ಕರ ಪ್ರಾಣವನ್ನು ಲೆಕ್ಕಿಸದೇ ಹೋರಾಡಿದ್ದಾರೆ. ಏನಿದು ಸ್ಟೋರಿ ಅಂತಿರಾ!? ಈ ಕೆಳಗೆ ಓದಿ
ಕೊಳ್ಳೇಗಾಲ ವನ್ಯಜೀವಿ ವಿಭಾಗದ ಕಗ್ಗಲಿಗುಂಡಿ ಪೋಡುವಿನ ಅರಣ್ಯಕ್ಕೆ ಚಿರತೆಯೊಂದು ತನ್ನ 6 ವರ್ಷದ ಮಗಳನ್ನು ಎಳೆದೊಯ್ಯಲು ಮುಂದಾದಾಗ ಎಚ್ಚೆತ್ತ ತಂದೆ ಮಗಳನ್ನು ಚಿರತೆಯ ದವಡೆಯಿಂದ ರಕ್ಷಿಸಿದ ದಾರುಣ ಘಟನೆ ನಡೆದಿದೆ.
ಹನೂರು ತಾಲೂಕಿನ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ಸೋಮವಾರ ರಾತ್ರಿ ಬಾಲಕಿ ಮೊಬೈಲ್ ನೋಡಿಕೊಂಡಿದ್ದಾಗ ಚಿರತೆ ಆಕೆಯ ಕತ್ತು ಹಿಡಿದು ಎಳೆದೊಯ್ಯಲು ಯತ್ನಿಸಿತ್ತು. ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದರಿಂದ ಆಕೆಯ ತಂದೆ ಮತ್ತು ಇತರ ಗ್ರಾಮಸ್ಥರು ಚಿರತೆಯನ್ನು ಬೆನ್ನಟ್ಟಲು ಮುಂದಾದರು.
ರಾಮು ಅವರ ಓಡಾಟದಿಂದ ಬೆಚ್ಚಿಬಿದ್ದ ಚಿರತೆ ಬಾಲಕಿಯನ್ನು ಮನೆ ಸಮೀಪದ 10 ಅಡಿ ಆಳದ ಕಂದಕಕ್ಕೆ ಹಾಕಿ ಓಡಿದೆ. ಆ ಪ್ರದೇಶದಲ್ಲಿ ವಾಸಿಸುವ 45 ಕುಟುಂಬಗಳ ಮೇಲೆ ಕಾಡು ಪ್ರಾಣಿಗಳು, ವಿಶೇಷವಾಗಿ ಆನೆಗಳು ಮತ್ತು ಚಿರತೆ, ಇತರ ಕಾಡು ಪ್ರಾಣಿಗಳು ಊರಿಗೆ ಬರದಂತೆ ತಡೆಯಲು ಕಂದಕವನ್ನು ನಿರ್ಮಿಸಲಾಗಿದೆ. ಬಾಲಕಿಯನ್ನು ರಕ್ಷಿಸಲಾಯಿತಾದರೂ ರಾಮು, ಆತನ ಪತ್ನಿ ಲಲಿತಾ ಮತ್ತು ಇತರ ಗ್ರಾಮಸ್ಥರು ಇನ್ನೂ ಆಘಾತದಿಂದ ಹೊರಬಂದಿಲ್ಲ. ಗಾಯಗೊಂಡ ಸುಶೀಲಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಾಗಿದೆ