ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಅವರ ಕರ್ಮ ಕಾಂಡಗಳು ಒಂದೊಂದಾಗೆ ಬಯಲಾಗುತ್ತಿದೆ. ದರ್ಶನ್ ಎಸಗಿದ್ದಾರೆ ಎನ್ನಲಾದ ಕೃತ್ಯಗಳ ಬಗ್ಗೆ ಸಾಕಷ್ಟು ಮಂದಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಕಳೆದ 8 ವರ್ಷಗಳ ಹಿಂದೆ ದರ್ಶನ್ ಮ್ಯಾನೇಜರ್ ಏಕಾಏಕಿ ನಾಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಮ್ಯಾನೇಜರ್ ಮಲ್ಲಿ ಕಾಣೆಯಾಗಿದ್ದರ ಹಿಂದೆ ದರ್ಶನ್ ಕೈವಾಡವಿದೆ ಎಂದು ಹೇಳಲಾಗಿತ್ತು. ಇದೀಗ ಮಲ್ಲಿ ಪತ್ರವೊಂದನ್ನು ಬರೆದಿದ್ದು ಆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ 8 ವರ್ಷದ ಹಿಂದೆ ಮಲ್ಲಿಕಾರ್ಜುನ್ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. 8 ಕೋಟಿಗಿಂತ ಹೆಚ್ಚು ಹಣ ದುರುಪಯೋಗ ಮಾಡಿಕೊಂಡ ಆರೋಪ ಮಲ್ಲಿಕಾರ್ಜುನ್ ಮೇಲಿತ್ತು. ಆದಾದ ಬಳಿಕ ಮಲ್ಲಿಕಾರ್ಜುನ್ ಏಕಾಏಕಿ ನಾಪತ್ತೆಯಾಗಿದ್ದರು. ಆದಾದ ಮೇಲೆ ಮಲ್ಲಿಕಾರ್ಜುನ್ ಎಲ್ಲಿ ಹೋದರು, ಏನಾದರು ಎನ್ನುವುದು ಯಾರಿಗೂ ಗೊತ್ತಾಗಲಿಲ್ಲ. ಇದೀಗ ದರ್ಶನ್ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗುತ್ತಿದ್ದಂತೆ ಮಲ್ಲಿಕಾರ್ಜುನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಇದೀಗ ಅದೇ ಮಲ್ಲಿಕಾರ್ಜುನ್ ಬರೆದಿದ್ದೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ಪ್ರೀತಿಯ ತೇಜಸ್ವಿನಿಗೆ ಅಂತ ಪತ್ರದಲ್ಲಿ ಬರೆಯಲಾಗಿದೆ. ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ ಅಂತ ಪತ್ರದಲ್ಲಿ ಬರೆಯಲಾಗಿದೆ.
ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ ಬಂದು ಸಾಲ ತೀರಿಸಿ, ನನಗಂಟಿರೋ ಕಳಂಕವನ್ನು ಹೋಗಲಾಡಿಸಿ, ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ ಅಂತ ಪತ್ರದಲ್ಲಿ ಬರೆಯಲಾಗಿದೆ.
ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ ಅಂತ ಆ ಪತ್ರದಲ್ಲಿ ಬರೆಯಲಾಗಿದೆ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಅಂತ ಪತ್ರದಲ್ಲಿ ಬರೆದಿದ್ದು, ಕೊನೆಯಲ್ಲಿ ಮಲ್ಲಿಕಾರ್ಜುನ್ ಅಂತ ಸಹಿ ಹಾಕಲಾಗಿದೆ.
ಇನ್ನು ಈ ಪತ್ರದಲ್ಲಿ ದರ್ಶನ್ ಬಗ್ಗೆಯಾಗಲಿ, ರೇಣುಕಾಸ್ವಾಮಿ ಹತ್ಯೆ ಬಗ್ಗೆ ಆಗಲಿ, ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್ ಅರೆಸ್ಟ್ ಆಗಿರೋ ಬಗ್ಗೆಯಾಗಲಿ ಏನೂ ಬರೆದಿಲ್ಲ. ಅಸಲಿಗೆ ಇದು ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ನೇ ಬರೆದ ಅಸಲಿ ಪತ್ರವೋ? ಅಥವಾ ನಕಲಿ ಪತ್ರವೋ ಅನ್ನೋದು ತಿಳಿದಿಲ್ಲ.