ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಇಲಾಖೆ ನೋಟಿಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಅಕ್ರಮವಾಗಿ ಐಪಿಎಲ್ನ ಪ್ರಸಾರ ಮಾಡಿದ ಆರೋಪ ಹೊಂದಿರುವ ‘ಫೇರ್ ಪ್ಲೇ’ ಆ್ಯಪ್ನ ಪ್ರಚಾರದಲ್ಲಿ ನಟಿ ತಮನ್ನಾ ಭಾಟಿಯಾ ಭಾಗಿ ಆಗಿದ್ದರು ಎನ್ನಲಾಗಿದೆ. ಈ ಆ್ಯಪ್ ಮಹದೇವ್ ಆನ್ಲೈನ್ ಗೇಮಿಂಗ್ ಆ್ಯಪ್ನ ಅಂಗಸಂಸ್ಥೆ ಆಗಿದ್ದು, ಇದರಿಂದ ತಮನ್ನಾ ಅವರಿಗೆ ತೊಂದರೆ ಆಗುವ ಸಾಧ್ಯತೆ ಇದೆ.
ಸೆಲೆಬ್ರಿಟಿಗಳು ಹಲವು ಪ್ರಾಡಕ್ಟ್ಗಳ ಪ್ರಚಾರ ಮಾಡುತ್ತಾರೆ. ಅನೇಕ ಬಾರಿ ತಾವು ಪ್ರಮೋಷನ್ ಮಾಡುತ್ತಿರುವ ಸಂಸ್ಥೆ ಎಂಥದ್ದು, ಅದರ ಹಿನ್ನೆಲೆ ಏನು ಎಂಬುದನ್ನು ತಿಳಿಯದೇ ದುಡ್ಡಿದಾಗಿ ಜಾಹೀರಾತು ಮಾಡಿಕೊಡುತ್ತಾರೆ. ಸಂಸ್ಥೆಗಳು ಈ ರೀತಿ ತೊಂದರೆಗೆ ಸಿಲುಕಿದಾಗ ಅದರ ಪ್ರಚಾರ ಮಾಡಿದವರೂ ವಿಚಾರಣೆ ಎದುರಿಸಬೇಕಾಗುತ್ತದೆ. ನಟಿ ತಮನ್ನಾ ವಿಚಾರದಲ್ಲಿ ಈಗ ಆಗಿರುವುದು ಹಾಗೇಯೇ.
2023ರ ಐಪಿಎಲ್ ಒಟಿಟಿ ಹಕ್ಕು ಜಿಯೋ ಸಿನಿಮಾ ಬಳಿ ಇತ್ತು. ಯಾವುದೇ ಬ್ರಾಡಕಾಸ್ಟಿಂಗ್ ಹಕ್ಕು ಪಡೆಯದೇ ಆ ವರ್ಷ ಐಪಿಎಲ್ನ ಫೇರ್ಪ್ಲೇ ಆ್ಯಫ್ನಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದ ಅಧಿಕೃತವಾಗಿ ಪ್ರಸಾರ ಹಕ್ಕು ಪಡೆದ ಜಿಯೋ ಸಿನಿಮಾಗೆ ಸಾಕಷ್ಟು ನಷ್ಟ ಆಗಿತ್ತು. ಹೀಗಾಗಿ, ಫೇರ್ಪ್ಲೇ ಆ್ಯಪ್ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಕೇವಲ ತಮನ್ನಾ ಮಾತ್ರವಲ್ಲದೆ ಗಾಯಕ ಬಾದ್ಶಾ, ನಟ ಸಂಜಯ್ ದತ್ಗೂ ಸಮನ್ಸ್ ನೀಡಲಾಗಿದೆ. ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ವಿಚಾರಣೆಗೆ ಹಾಜರಾಗಲು ಮತ್ತಷ್ಟು ಸಮಯ ಕೇಳಿದ್ದಾರೆ. ನಟಿ ತಮನ್ನಾ ಕೂಡ ಸದ್ಯ ಬ್ಯುಸಿ ಇದ್ದಾರೆ. ಹೀಗಾಗಿ, ಅವರು ವಿಚಾರಣೆಗೆ ಹೆಚ್ಚಿನ ಸಮಯ ಕೇಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.