ನವದೆಹಲಿ: ಕುಡಿದ ಮತ್ತಿನಲ್ಲಿ ದೆಹಲಿ ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಕರೆ ಮಾಡಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಾತನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೃಷ್ಣೋ ಮಹತೋ (38) ಎಂದು ಗುರುತಿಸಲಾಗಿದೆ. ಬಿಹಾರದ ಪಶ್ಚಿಮ ಚಂಪಾರಣ್ನಿಂದ ಬಂದಿರುವ ಈತನನ್ನು ದೆಹಲಿಯ ಕಪಶೇರಾದಲ್ಲಿ ಬಂಧಿಸಲಾಗಿದೆ
ಬೆದರಿಕೆ ಕರೆ: ಜನವರಿ 28 ರಂದು ಕೃಷ್ಣೋ ಮಹತೋ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ. ಈ ಆರೋಪದ ಮೇಲೆ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಐಜಿಐ ಏರ್ಪೋರ್ಟ್) ಉಷಾ ರಂಗನಾನಿ ಮಾತನಾಡಿ, ವಿಚಾರಣೆ ವೇಳೆ ಮಹತೋ ಬಾಂಬ್ ಬೆದರಿಕೆ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜನವರಿ 28 ರಂದು ಕುಡಿದ ಮತ್ತಿನಲ್ಲಿ ಮಹತೋ ತನ್ನ ಮೊಬೈಲ್ ಫೋನ್ನಿಂದ ಕರೆ ಮಾಡಿ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಕರೆ ಮಾಡಿದ ನಂತರ ಮಹತೋ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಆತನ ಪತ್ತೆ ಮಾಡುವಲ್ಲಿ ಸ್ವಲ್ಪ ತಡವಾಯಿತು. ಕೊನೆಗೆ ಆತನ ಮನೆಯ ವಿಳಾಸದಲ್ಲಿ ಮೊಬೈಲ್ ಫೋನ್ ಸಂಖ್ಯೆ ದಾಖಲಾಗಿದ್ದರಿಂದ ಪೊಲೀಸ್ ತಂಡ ಬಿಹಾರದಲ್ಲಿರುವ ಆತನ ಸ್ಥಳೀಯ ಸ್ಥಳಕ್ಕೆ ಭೇಟಿ ನೀಡಿ ಬಂಧಿಸುವಲ್ಲಿ ಯಶ್ಸವಿಯಾಯಿತು ಎಂದು ಉಷಾ ಹೇಳಿದರು.