ಅಹಮದಾಬಾದ್ : ನವಜಾತ ಶಿಶುವನ್ನು ಆಸ್ಪತ್ರೆಯ ಶೌಚಾಲಯದಿಂದ ಹೊರಗೆ ಎಸೆದು ಕೊಂದ ಘಟನೆ ಇತ್ತೀಚೆಗೆ ಪುಣೆಯಲ್ಲಿ ವರದಿಯಾಗಿತ್ತು. ಈಗ ಅದೇ ರೀತಿಯ ಘಟನೆ ಅಹಮದಾಬಾದ್ನಲ್ಲಿ ವರದಿಯಾಗಿದೆ. ಈ ಕಾರಣಕ್ಕೆ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 302, 318ರಲ್ಲಿ ಕೊಲೆ ಕೇಸ್ ದಾಖಲು ಮಾಡಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ, ತಾನು ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಕಸ ಎಸೆಯುವ ರೀತಿಯಲ್ಲಿ 9ನೇ ಮಹಡಿಯಲ್ಲಿದ್ದ ತನ್ನ ಮನೆಯ ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ.
ಚಾಂದ್ಖೇಡಾದಲ್ಲಿನ ಅಪಾರ್ಟ್ಮೆಂಟ್ನಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ತನ್ನ ಬಾಯ್ಫ್ರೆಂಡ್ ಜೊತೆಗೆ ಹೊಂದಿದ್ದ ಸಂಬಂಧವನ್ನು ಮರೆಮಾಚಲು ಮಹಿಳೆ ಈ ಭೀಕರ ಕೊಲೆ ಮಾಡಿದ್ದಾಳೆ. ಅದಾಜು 25 ವರ್ಷದ ಯುವತಿ ಹೇಳಿರುವ ಪ್ರಕಾರ, ನಾನು ಗರ್ಭಿಣಿಯಾಗಿದ್ದು ನನಗೆ ತಿಳಿದಿರಲಿಲ್ಲ. ಋತುಚಕ್ರ ವಿಳಂಬವಾಗುತ್ತಿರುವುದಕ್ಕೆ ಅತಿಯಾದ ರಕ್ತಸ್ರಾವವೇ ಕಾರಣ ಎಂದು ಭಾವಿಸಿದ್ದೆ. ಆದರೆ, ಶೌಚಾಲಯದಲ್ಲಿ ನಾನು ಗಂಡುಮಗುವಿಗೆ ಜನ್ಮನೀಡಿದಾಗ, ಸಮಾಜಕ್ಕೆ ಹೆದರಿ ಅದನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದೆ ಎಂದು ಹೇಳಿದ್ದಾಳೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ನೆರೆಹೊರೆಯ ಮನೆಯವರಿಗೆ ಇದರ ಸದ್ದು ಕೇಳಿಸಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನವಜಾತ ಶಿಶು ಬಿದ್ದ ಸ್ಥಳದ ಅಕ್ಕಪಕ್ಕ ರಕ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ನೋಡಿದ್ದು, ಮಗು ತಕ್ಷಣವೇ ಸಾವು ಕಂಡಿದೆ ಎಂದು ಪೊಲೀಸರು ಹೇಳಿದ್ದಾರೆ. ಶೀಲಾ (ಹೆಸರು ಬದಲಾಯಿಸಲಾಗಿದೆ) ಎಂ.ಕಾಮ್ ಪದವೀಧರೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಿದ್ದಾಳೆ. ಚಾಂದ್ಖೇಡಾದಲ್ಲಿನ ತನ್ನ ಪೋಷಕರ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದಳು. ಈ ವೇಳೆ ತಾನು ಕೆಲಸ ಮಾಡುವ ಕಂಪನಿಯಲ್ಲಿದ್ದ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಪಾರ್ಟ್ಮೆಂಟ್ನಲ್ಲಿ ಶೀಲಾಳ ಜೊತೆ ಆಕೆಯ ಪಾಲಕರು, ಸೋದರ ಮತ್ತು ಸೋದರಿ ವಾಸವಿದ್ದಳು ಎಂದು ಚಾಂದ್ಖೇಡಾ ಪೋಲೀಸರು ತಿಳಿಸಿದ್ದಾರೆ.