ವೇದ ಸಿನಿಮಾ ನಂತರ ಶಿವರಾಜ್ ಕುಮಾರ್ ಬ್ಯಾನರ್ ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿತ್ತು. ‘ಭೈರತಿ ರಣಗಲ್’ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ನಿರ್ದೇಶಕ ನರ್ತನ್, ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಹಲವರು ಮುಹೂರ್ತ (Muhurta) ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ‘ನರ್ತನ್ ನಿರ್ದೇಶನ ಅಂದರೆ, ಸೈಲೆನ್ಸ್ ಅಲ್ಲಿ ವೈಯಲೆನ್ಸ್ ಇರುತ್ತದೆ. ಇದು ಸಸ್ಪೆನ್ಸ್ ಅಂಶಗಳನ್ನು ಹೊಂದಿರುವಂತಹ ಸಿನಿಮಾ. ಶಿವಣ್ಣನಿಗೆ 61 ವರ್ಷ ವಯಸ್ಸಾದರೂ ಇನ್ನೂ ಯುದ್ಧಕ್ಕೆ ಕಳುಹಿಸ್ತಾನೆ ಇದ್ದಾರೆ. ಈ ಸಿನಿಮಾವನ್ನು ಗೀತಾ ಪಿಕ್ಚರ್ಸ್ ನಲ್ಲಿ ಮಾಡಬೇಕು ಎನ್ನುವುದು ಹಲವು ದಿನಗಳ ಹಿಂದಿನ ನಿರ್ಧಾರವಾಗಿತ್ತು. ಈಗ ಅದಕ್ಕೆ ಚಾಲನೆ ಸಿಕ್ಕಿದೆ’ ಎಂದರು.
ಗೀತಾ ಪಿಕ್ಚರ್ಸ್ ಬ್ಯಾನರ್ ನಲ್ಲಿ (Geeta Pictures) ನಿರ್ಮಾಣವಾಗುತ್ತಿರುವ 2ನೇ ಸಿನಿಮಾವಿದು. ಶಿವರಾಜ್ ಕುಮಾರ್ (Shivraj Kumar) ಮತ್ತು ನಿರ್ದೇಶಕ ನರ್ತನ್ (Narthan) ಈ ಸಿನಿಮಾದ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಐದು ವರ್ಷಗಳ ನಂತರ ಮಫ್ತಿ (Mufti) ಸಿನಿಮಾದ ಭೈರತಿ ರಣಗಲ್ (Bhairati Rangal) ಪಾತ್ರದ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಿಚ್ಚಿಡಲಿದ್ದಾರೆ. ಹಾಗಾಗಿ ಇದು ಮಫ್ತಿ ಸಿನಿಮಾದ ಸೀಕ್ವೆಲ್ ಅಲ್ಲ, ಪ್ರೀಕ್ವೆಲ್ ಸಿನಿಮಾ ಎನ್ನಲಾಗುತ್ತಿದೆ. ಭೈರತಿ ರಣಗಲ್ ನ ರೋಚಕ ಸಂಗತಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು.
ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಆ ನಂತರ ಯಶ್ ಗಾಗಿ ಅವರು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಬರೋಬ್ಬರಿ ಎರಡ್ಮೂರು ವರ್ಷಗಳ ಕಾಲ ಯಶ್ ಹಿಂದೆ ಸುತ್ತಿದರು ನರ್ತನ್. ಒಂದು ವರ್ಷಕ್ಕೂ ಹೆಚ್ಚು ಕಾಲ ಕೂತು ಯಶ್ ಗಾಗಿ ಕಥೆ ಬರೆದರು. ಆನಂತರ ಆ ಸಿನಿಮಾ ಆಗಲಿಲ್ಲ. ನಾನಾ ಕಾರಣಗಳಿಂದಾಗಿ ಯಶ್ ಗಾಗಿ ನರ್ತನ್ ಸಿನಿಮಾ ಮಾಡುವುದಿಲ್ಲ ಎನ್ನುವ ವಿಷಯ ಹೊರಬಿತ್ತು.
ಶಿವರಾಜ್ ಕುಮಾರ್ ವೃತ್ತಿ ಬದುಕಿನಲ್ಲಿ ಮಫ್ತಿ ಕೂಡ ಒಂದೊಳ್ಳೆ ಸಿನಿಮಾದ ಯಾದಿಯಲ್ಲಿದೆ. ಹಾಗಾಗಿ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನರ್ತನ್ ಗೆ ಅವಕಾಶ ನೀಡಿದ್ದಾರೆ ಶಿವಣ್ಣ. ಈ ಸಿನಿಮಾಗೆ ‘ಭೈರತಿ ರಣಗಲ್’ ಎಂದು ಹೆಸರಿಟ್ಟಿದ್ದಾರೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ಮಾಡಿದ್ದ ಪಾತ್ರದ ಹೆಸರು ಇದಾಗಿದೆ. ಈ ಸಿನಿಮಾ ಕುರಿತು ಗೀತಾ ಪಕ್ಚರ್ಸ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ