ಬಹುನಿರೀಕ್ಷಿತ ‘ದಿ ಡೈರಿ ಆಫ್ ಪಶ್ಚಿಮ ಬಂಗಾಳ’ ಸಿನಿಮಾದ ಬಿಡುಗಡೆಗೆ ತಡೆ ನೀಡಲು ಕೊಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ಚಿತ್ರದ ಬಿಡುಗಡೆಗೆ ಇದ್ದ ಅಡ್ಡಿ ಆತಂಕ ನಿವಾರಣೆಯಾದಂತಾಗಿದೆ.
ಸನೋಜ್ ಮಿಶ್ರಾ ನಿರ್ದೇಶನದ ದಿ ಡೈರಿ ಆಫ್ ಪಶ್ಚಿಮ ಬಂಗಾಳ ಸಿನಿಮಾ 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸುತ್ತಲಿನ ಘಟನೆಗಳನ್ನು ಆಧರಿಸಿದೆ. ಚಿತ್ರ ಇಂದು ಅದ್ದೂರಿಯಾಗಿ ತೆಗೆಗೆ ಬಂದಿದೆ. ಈ ಚಿತ್ರದ ಬಿಡುಗಡೆಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬರಬಹುದು ಎಂದು ಆರೋಪಿಸಿ, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಕೋರಿ ರಾಜೀವ್ ಕುಮಾರ್ ಝಾ ಎಂಬುವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸೋಮವಾರ ನಡೆದ ವಿಚಾರಣೆಯ ಸಮಯದಲ್ಲಿ, ನ್ಯಾಯಪೀಠವು ಅರ್ಜಿದಾರರನ್ನು ನೀವು ಚಲನಚಿತ್ರವನ್ನು ನೋಡಿದ್ದೀರಾ ಎಂದು ಪ್ರಶ್ನಿಸಿತ್ತು. ಅರ್ಜಿದಾರರು ನೋಡಿಲ್ಲವೆಂದು ಉತ್ತರಿಸಿದಾಗ, ಕೇವಲ ಊಹೆಗಳ ಆಧಾರದ ಮೇಲೆ ಯಾವುದೇ ಚಲನಚಿತ್ರದ ಬಿಡುಗಡೆಯನ್ನು ಈ ರೀತಿ ತಡೆಹಿಡಿಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಚಿತ್ರ ಬಿಡುಗಡೆಯಾದ ನಂತರ ಚಿತ್ರದಲ್ಲಿ ಏನಾದರೂ ಆಕ್ಷೇಪಾರ್ಹ ಅಂಶಗಳಿರುವುದು ಕಂಡುಬಂದರೆ, ಆಗ ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಇಷ್ಟವಿರುವವರು ಚಿತ್ರವನ್ನು ನೋಡಬಹುದು ಮತ್ತು ಬೇಡವಾದವರು ಬಿಡಬಹುದು ಎಂದು ನ್ಯಾಯಾಲಯ ಹೇಳಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ, ಯೂಟ್ಯೂಬ್ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಚಿತ್ರದಲ್ಲಿ ಪಶ್ಚಿಮ ಬಂಗಾಳವನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಆಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಕೋಲ್ಕತಾ ಪೊಲೀಸರು ಚಿತ್ರದ ನಿರ್ದೇಶಕರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.