ಒಂದೇ ಮನೆಯಲ್ಲಿ ಮೂವರು ನಿಗೂಢ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲ್ಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ರಾಮೇಶ್ವರಿ (50), ವಸಂತಾ (32) ಸಾಯಿಧರ್ಮ ತೇಜ (5) ನಿಗೂಢವಾಗಿ ಮೃತಪಟ್ಡವರಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿಗೆ ಕಾರಣವೇನು ಎಂಬುದು ಪ್ರಾಥಮಿಕ ತನಿಖೆಯ ನಂತರವೇ ಬಹಿರಂಗವಾಗಲಿದೆ.
ಏಕಕಾಲಕ್ಕೆ ತಾಯಿ, ಮಗಳು, ಮೊಮ್ಮಗ ಮೂವರೂ ಮನೆಯಲ್ಲಿದ್ದಾಗಲೇ ಏಕಕಾಲದಲ್ಲಿ ಮೃತಪಟ್ಟಿರುವುದು ಆಶ್ಚರ್ಯ ತಂದಿದೆ. ರಾಮೇಶ್ವರಿ ಹಾಗೂ ವಸಂತಾ ತಾಯಿ – ಮಗಳಾಗಿದ್ದು, ಸಾಯಿಧರ್ಮ ತೇಜ ವಸಂತಾಳ ಮಗನಾಗಿದ್ದ. ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿರುವ ಹೊಸಲಿಂಗಾಪುರ ಆಶ್ರಯ ಕಾಲೋನಿಯ ಮೂರನೇ ವಾರ್ಡಿನಲ್ಲಿ ಬಾಡಿಗೆ ಮನೆಯಲ್ಲಿ ರಾಜೇಶ್ವರಿ, ಆಕೆಯ ಮಗಳು ವಸಂತಾ ಹಾಗೂ ಸಾಯಿಧರ್ಮ ತೇಜ ವಾಸವಾಗಿದ್ದರು. ಸದ್ಯದ ಮಟ್ಟಿಗೆ ಇದೊಂದು ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.