ನವದೆಹಲಿ: ಏಳು ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ್ದ ಸೂಜಿಯೊಂದನ್ನು ದಿಲ್ಲಿಯ ಏಮ್ಸ್ ವೈದ್ಯರು ಆಯಸ್ಕಾಂತ ಬಳಸಿ ಹೊರಗೆ ತೆಗೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಶಿಶುವೈದ್ಯ ಸರ್ಜರಿ ವಿಭಾಗದ ವೈದ್ಯರು ಬಹಳ ಸೂಕ್ಷ್ಮವಾದ ಎಂಡೋಸ್ಕೋಪಿಕ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಬಾಲಕನ ಎಡ ಭಾಗದ ಶ್ವಾಸಕೋಶದ ಒಳಗೆ 4 ಸೆಂಮೀ ಉದ್ದದ ಸೂಜಿ ಸೇರಿಕೊಂಡಿತ್ತು. ಶಸ್ತ್ರಚಿಕಿತ್ಸೆಗೆ ಬಳಸುವ ಸಾಧನಗಳನ್ನು ಬಳಸಲು ಇಲ್ಲಿ ಹೆಚ್ಚು ಜಾಗ ಇರಲಿಲ್ಲ. ಹೀಗಾಗಿ ಸರ್ಜರಿ ನಡೆಸದೆಯೇ ಸೂಜಿಯನ್ನು ಹೊರಗೆ ತೆಗೆಯುವ ಜಟಿಲವಾದ ಸವಾಲು ಅವರ ಮುಂದಿತ್ತು ಎಂದು ಏಮ್ಸ್ ತಿಳಿಸಿದೆ. ಸೂಜಿ ಒಳ ಸೇರಿದ್ದರಿಂದ ಬಾಲಕನಲ್ಲಿ ರಕ್ತಯುತ ಕೆಮ್ಮಿನ ಹೆಮೋಪ್ಟಿಸಿಸ್ ಸಮಸ್ಯೆ ಉಂಟಾಗಿತ್ತು.
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವನನ್ನು ಬುಧವಾರ ಏಮ್ಸ್ಗೆ ದಾಖಲಿಸಲಾಗಿತ್ತು. ಹೊಲಿಗೆ ಯಂತ್ರದಲ್ಲಿ ಬಳಸುವ ಸೂಜಿಯು ಆತನ ಎಡ ಶ್ವಾಸಕೋಶದ ಆಳದಲ್ಲಿ ಸಿಲುಕಿರುವುದು ರೇಡಿಯಾಲಜಿ ಪರೀಕ್ಷೆಯಿಂದ ತಿಳಿದುಬಂದಿತ್ತು ಎಂದು ಶಿಶುವೈದ್ಯ ಸರ್ಜರಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ ವಿಶೇಷ್ ಜೈನ್ ತಿಳಿಸಿದ್ದಾರೆ.
ಸರ್ಜರಿ ನಡೆಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಡಾ ಜೈನ್, ಅದೇ ದಿನ ಸಂಜೆ ಪರಿಚಿತರೊಬ್ಬರಿಂದ ಚಾಂದಿನಿ ಚೌಕ್ ಮಾರುಕಟ್ಟೆಯಿಂದ ಆಯಸ್ಕಾಂತ ತರಿಸಿಕೊಂಡರು. “4 ಮಿಮೀ ಅಗಲ ಹಾಗೂ 1.5 ಮಿಮೀ ದಪ್ಪನೆಯ ಆಯಸ್ಕಾಂತ ಈ ಕೆಲಸಕ್ಕೆ ಬಹಳ ಪರಿಪೂರ್ಣವಾಗಿತ್ತು” ಎಂದು ಜೈನ್ ಹೇಳಿದ್ದಾರೆ. ಪ್ರಕ್ರಿಯೆಯ ಸಂಕೀರ್ಣತೆಯನ್ನು ವಿವರಿಸಿರುವ ಶಿಶುವೈದ್ಯ ಸರ್ಜರಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ ದೇವೇಂದ್ರ ಕುಮಾರ್ ಯಾದವ್,
ಶ್ವಾಸಕೋಶದ ಒಳಗೆ ಸೂಜಿ ಎಷ್ಟು ಆಳದಲ್ಲಿ ಇತ್ತು ಎಂದರೆ, ಅದನ್ನು ಹೊರತೆಗೆಯಲು ಸಾಂಪ್ರದಾಯಿಕ ವಿಧಾನಗಳು ಪರಿಣಾಮಕಾರಿಯಾಗುವುದು ಬಹುತೇಕ ಸಾಧ್ಯವೇ ಇರಲಿಲ್ಲ ಎಂದಿದ್ದಾರೆ. ಇದನ್ನು ಅರಿತ ವೈದ್ಯರ ತಂಡವು ತೀವ್ರ ಚರ್ಚೆ ನಡೆಸಿತು. ಸೂಜಿಯನ್ನು ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಹೊರಗೆ ತೆಗೆಯುವ ಅತ್ಯಾಧುನಿಕ ಪರಿಹಾರಗಳ ಬಗ್ಗೆ ಸಾಕಷ್ಟು ಸಮಾಲೋಚನೆ ನಡೆಸಲಾಗಿತ್ತು. ಇದಕ್ಕೆ ಆಯಸ್ಕಾಂತ ಪ್ರಯೋಗ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.