ಪಟನಾ: ಐಎನ್ಡಿಐಎ ಮೈತ್ರಿಕೂಟ ಒಂದು ದೊಡ್ಡ ‘ವಂಚಕರ ಸಭಾಕೂಟ’ ಎಂದು ಜರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಓಲೈಕೆ ರಾಜಕಾರಣವನ್ನೇ ನಡೆಸಿಕೊಂಡು ಬರುತ್ತಿರುವ ಈ ಮೈತ್ರಿಕೂಟದ ಪಕ್ಷಗಳ ಪಾಪ ಕೃತ್ಯಗಳೊಂದಿಗೆ ದೇಶವನ್ನು ಮುನ್ನಡೆಸಲಾಗದು,” ಎಂದು ಕುಟುಕಿದರು.
“ಸನಾತನ ಧರ್ಮ ವಿರೋಧಿ ನಿಲುವು ಹೊಂದಿರುವ ಪ್ರತಿಪಕ್ಷಗಳಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲು ನಿಶ್ಚಿತವಾಗಲಿದೆ. 20 ಲಕ್ಷ ಕೋಟಿ ರೂ. ಮೊತ್ತದ ಹಗರಣಗಳನ್ನು ನಡೆಸಿದ ಪಕ್ಷಗಳಿಂದ ದೇಶದ ಏಳಿಗೆ ಎಂದಿಗೂ ಸಾಧ್ಯವಿಲ್ಲ,” ಎಂದರು. “ದೇಶದ ಜನರೇ ತಮ್ಮ ನನ್ನ ಉತ್ತರಾಧಿಕಾರಿಯಾಗಿದ್ದು, ಜೂನ್ 4ರ ಫಲಿತಾಂಶವೇ ಎಲ್ಲವನ್ನೂ ಹೇಳಲಿದೆ,” ಎಂದು ಮೋದಿ ನುಡಿದರು.
“ದೇಶಕ್ಕೆ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ನೀಡಿದ ಪುಣ್ಯಭೂಮಿ ಬಿಹಾರವನ್ನು ಜಂಗಲ್ರಾಜ್ ಆಗಿ ಮಾರ್ಪಡಿಸಿದ ಅಪಖ್ಯಾತಿ ಆರ್ಜೆಡಿ-ಕಾಂಗ್ರೆಸ್ನದ್ದಾಗಿದೆ. 1990ರ ದಶಕದಲ್ಲಿ ರಾಜ್ಯದಲ್ಲಿಸುಲಿಗೆ ವಿಪರೀತವಾಗಿತ್ತು. ಕೈಗಾರಿಕೆಗಳಿಲ್ಲದೇ ಬಿಹಾರಿಗಳು ದೇಶದ ಬೇರೆ ಭಾಗಗಳಿಗೆ ಕೆಲಸ ಅರಸಿಕೊಂಡು ವಲಸೆ ಹೋಗುವುದು ಹೆಚ್ಚಿತ್ತು. ಬಿಜೆಪಿ-ಜೆಡಿಯು ನೇತೃತ್ವದ ಸಮ್ಮಿಶ್ರ ಸರಕಾರವು ಅದಕ್ಕೆ ತಡೆ ಹಾಕುವ ಎಲ್ಲಪ್ರಯತ್ನ ನಡೆಸಿದೆ,” ಎಂದು ಹೇಳಿದರು.