ನವದೆಹಲಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್ರೂಮ್ ಮತ್ತು ಬೆಡ್ರೂಮ್ನ ಬಲ್ಬ್ಗಳಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕರಣ್ ಮನೆ ಮಾಲೀಕನ ಮಗನಾಗಿದ್ದು, ಕಟ್ಟಡದ ಇನ್ನೊಂದು ಮಹಡಿಯಲ್ಲಿ ವಾಸವಾಗಿದ್ದ. ಸಿವಿಲ್ ಸರ್ವೀಸ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮಹಿಳೆ ಶಕರ್ಪುರದ ಬಾಡಿಗೆಗೆ ಇದ್ದರು. ಮಹಿಳೆ ಇತ್ತೀಚೆಗೆ ಉತ್ತರ ಪ್ರದೇಶದ ತನ್ನ ಊರಿಗೆ ತೆರಳುವಾಗ ಮನೆಯ ಕೀಯನ್ನು ಅವನ ಬಳಿ ಕೊಟ್ಟು ಹೋಗಿದ್ದಳು.
ಈ ವೇಳೆ ಆರೋಪಿ, ಮಹಿಳೆ ವಾಸವಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಅಪೂರ್ವ ಗುಪ್ತಾ ಅವರು, ಮಹಿಳೆ ಇತ್ತೀಚೆಗೆ ತನ್ನ ವಾಟ್ಸಪ್ ಖಾತೆಯಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದ್ದಳು. ಬಳಿಕ ಆಕೆಯ ವಾಟ್ಸಪ್ ಖಾತೆಯನ್ನು ಬೇರೆ ಲ್ಯಾಪ್ಟಾಪ್ನಲ್ಲಿ ಬಳಕೆ ಮಾಡುತ್ತಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ತಕ್ಷಣ ಲಾಗ್ ಔಟ್ ಮಾಡಿದ್ದಳು.
ಬಳಿಕ ತನ್ನನು ಯಾರೋ ಕಣ್ಗಾವಲಿನಲ್ಲಿಟ್ಟಿದ್ದಾರೆ ಎಂದು ಶಂಕಿಸಿ ಮಹಿಳೆ ಮನೆಯನ್ನು ಹುಡುಕಿದಾಗ ಬಾತ್ರೂಮ್ನಲ್ಲಿ ಅಡಗಿಸಿಟ್ಟಿದ್ದ ಕ್ಯಾಮೆರಾ ಪತ್ತೆಯಾಗಿದೆ. ಬಳಿಕ ಮಹಿಳೆ ಪೊಲಿಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಮತ್ತೆ ತಪಾಸಣೆ ನಡೆಸಿದಾಗ ಆಕೆಯ ಮಲಗುವ ಕೋಣೆಯ ಬಲ್ಬ್ ಹೋಲ್ಡರ್ನಲ್ಲಿ ಮತ್ತೊಂದು ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಕರಣ್, ಮೂರು ತಿಂಗಳ ಹಿಂದೆ ಮಹಿಳೆ ಊರಿಗೆ ತೆರಳಿದ್ದಾಗ ರೂಮಿನ ಕೀ ನನ್ನ ಬಳಿ ಕೊಟ್ಟು ಹೋಗಿದ್ದಳು. ಈ ವೇಳೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿ ಅಳವಡಿಸಿದ್ದಾಗಿ ಹೇಳಿದ್ದಾನೆ.
ಈ ಕ್ಯಾಮೆರಾಗಳನ್ನು ಆನ್ಲೈನ್ನಲ್ಲಿ ನಿರ್ವಹಿಸಲಾಗುವುದಿಲ್ಲ. ದೃಶ್ಯಗಳನ್ನು ಮೆಮೊರಿ ಕಾರ್ಡ್ಗಳಲ್ಲಿ ಸಂಗ್ರಹಿಸಲಾಗುತ್ತದೆ. ಹೀಗಾಗಿ, ಕರಣ್ ತನ್ನ ಕೋಣೆಯಲ್ಲಿನ ವಿದ್ಯುತ್ ರಿಪೇರಿ ನೆಪದಲ್ಲಿ ಮಹಿಳೆಯ ಕೀಗಳನ್ನು ಪದೇ ಪದೇ ಕೇಳುತ್ತಿದ್ದ. ಇದರಿಂದಾಗಿ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ತನ್ನ ಲ್ಯಾಪ್ಟಾಪ್ಗೆ ವರ್ಗಾಯಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಿಸಿದ ಕ್ಯಾಮೆರಾ ಹಾಗೂ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿಕಲಾಂಗನಾಗಿದ್ದು ಆತನ ವಿರುದ್ಧ ಬಿಎನ್ಎಸ್ಎಸ್ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.