ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಂಗಡಿಗರು ಜೈಲು ಸೇರಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಭೀಕರವಾಗಿ ಹತ್ಯೆ ಮಾಡಿದ ಆರೋಪ ಕೇಳಿ ಬಂದಿದೆ. ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿ ಎರಡು ತಿಂಗಳು ಕಳೆದಿದೆ.
ನೋವಿನಲ್ಲಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡಿ ಸಾಂತ್ವಾನ ಹೇಳುತ್ತಿರುತ್ತಾರೆ. ಇದೀಗ ನಟ ಪ್ರಥಮ್ ಕೂಡ ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿಯ ಮನೆಯವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ್ದಾರೆ.
ಕಣ್ಣೀರು ಹಾಕುತ್ತಿರುವ ರೇಣುಕಾಸ್ವಾಮಿ ತಂದೆ-ತಾಯಿ ಜೊತೆ ಮಾತನಾಡಿದ ಬಳಿಕ ಪ್ರಥಮ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಉದ್ಘಾಟನೆಗೆ ಬಂದಿದ್ದೆ. ಮನಸ್ಸು ನೋಯಿಸಲು ಅಥವಾ ಯಾರನ್ನೋ ಸಮರ್ಥನೆ ಮಾಡಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವಿಚಾರ ಕಾಡುತ್ತಿತ್ತು. ತುಂಬಾ ಹೀನಾಯವಾಗಿ ಸಾವಾಗಿತ್ತು. ಸಹನಾ ಅವರನ್ನು ಮಾತನಾಡಿಸಬೇಕು ಎಂಬುದು ನನ್ನ ತಲೆಯಲ್ಲಿತ್ತು’ ಎಂದು ಪ್ರಥಮ್ ಹೇಳಿದ್ದಾರೆ.
‘ನನ್ನ ಕೈಯಿಂದ ಏನು ಸಾಧ್ಯವೋ ಅದನ್ನು ಮಾಡಬೇಕು. ಅವರ ನೋವು ನನ್ನನ್ನು ತುಂಬ ಕಾಡುತ್ತಿತ್ತು. ಅವರು ತುಂಬ ಪ್ರಭುದ್ಧರಾಗಿ ಮಾತನಾಡುತ್ತಿದ್ದರು. ಅವರ ಮುಗ್ಧತೆ ನನಗೆ ಹೆಚ್ಚು ನೋವು ನೀಡುತ್ತಿತ್ತು. ಅವರನ್ನು ನೋಡಲೇಬೇಕು ಎಂಬುದು ನನಗಿತ್ತು. ಈಗ ಸತತ ಆರು ವಾರದಿಂದ ಹೊಸ ಶೋ ಮಾಡುತ್ತಿದ್ದೇನೆ. ಅದರಿಂದ ನನಗೆ ವಿಶ್ರಾಂತಿ ಇಲ್ಲದಂತೆ ಆಗಿತ್ತು. ಈ ಕುಟುಂಬದವರನ್ನು ನೋಯಿಸಲು ಅಥವಾ ಇನ್ನಾವುದೋ ಹೇಳಿಕೆ ನೀಡಲು ನಾನು ಬಂದಿಲ್ಲ’ ಎಂದಿದ್ದಾರೆ ಪ್ರಥಮ್.
‘ಜನರಿಗೆ ಒಂದು ಮಾತು ಹೇಳುತ್ತೇನೆ. ನೀವು ಯಾವುದೇ ಹೇಳಿಕೆ ನೀಡಿದರೆ ಸಹನಾ ಅವರ ಕುಟುಂಬಕ್ಕೆ ಹೆಚ್ಚು ನೋವಾಗುತ್ತದೆ. ನನ್ನ ಮನೆ ಮುಂದೆ ಸೆಕ್ಷನ್ 144 ಹಾಕಿದ್ದರು. ಆಗ ಮಾಧ್ಯಮದವರು ಮತ್ತು ಪೊಲೀಸರು ಕಷ್ಟಪಟ್ಟು ಕೆಲಸ ಮಾಡಿದ್ದರು. ಆಗ ಸೆಕ್ಷನ್ 144 ಹಾಕಿದ್ದರು ಎಂಬ ನೋವು ನನಗೆ ಇತ್ತು. ಆ ಸಂದರ್ಭದಲ್ಲಿ ನಾನು ನೀಡಿದ ಹೇಳಿಕೆ ತಿರುಚಿದ್ದಕ್ಕೆ ನನಗೆ ಬಹಳ ನೋವಾಗಿತ್ತು. ನನ್ನ ಹೇಳಿಕೆಯಿಂದ ನಿಮಗೆ ನೋವಾಗಿದೆ ಎಂಬುದಾದರೆ ಈ ಕುಟುಂಬ ಮಗನನ್ನೇ ಕಳೆದುಕೊಂಡ ನೋವಿನಲ್ಲಿದೆ. ಆ ಬಗ್ಗೆ ಸ್ವಲ್ಪ ಯೋಚಿಸಿ’ ಎಂದು ಪ್ರಥಮ್ ಅವರು ಹೇಳಿದ್ದಾರೆ.