ನವದೆಹಲಿ: ಅಸ್ಸಾಂನ ಗುವಾಹಟಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಪ್ರಯಾಣಿಕರು ಓಡಾಟುವ ಸ್ಥಳದಲ್ಲಿ ವಾಂತಿ ಮಾಡಿಕೊಂಡಿದ್ದಾನಲ್ಲದೇ ಶೌಚಾಲಯದ ಸುತ್ತ ಮಲ ವಿಸರ್ಜನೆ ಮಾಡಿ ಉಳಿದ ಪ್ರಯಾಣಿಕರಿಗೆ ತೀವ್ರ ಅಸಹ್ಯ ಮತ್ತು ಮುಜುಗರ ಉಂಟು ಮಾಡಿದ್ದಾನೆ. ಘಟನೆ ಕುರಿತು ಟ್ವೀಟರ್ನಲ್ಲಿ ಜನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದು ಇತ್ತೀಚೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರು ಪಾನಮತ್ತರಾಗಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಂತಹ ಅಸಹ್ಯಕರ ಘಟನೆಗಳನ್ನೇ ನೆನಪಿಸುವಂತಿದೆ.
ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಭಾಸ್ಕರ್ ದೇವ್ ಕೊನ್ವಾರ್ ಎಂಬುವವರು ಟ್ವೀಟರ್ನಲ್ಲಿ ಘಟನೆಯ ಫೋಟೊ ಹಂಚಿಕೊಂಡಿದ್ದು, ವಿಮಾನದ ಮಹಿಳಾ ಸಿಬ್ಬಂದಿಗಳು ಕೂಡಲೇ ಇದನ್ನು ಶುಚಿಗೊಳಿಸಿದರು. ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಸೆಲ್ಯೂಟ್ ಗರ್ಲ್ಸ್ ಪವರ್ ಎಂದು ಬರೆದುಕೊಂಡಿದ್ದಾರೆ. ಸಿಬ್ಬಂದಿಗಳು ಕೈಕವಚ ಮತ್ತು ಮಾಸ್ಕ್ ಧರಿಸಿ ಪಾನಮತ್ತ ಮಾಡಿದ ವಾಂತಿಯನ್ನು ಶುಚಿಗೊಳಿಸಿ ಸ್ಪ್ರೇ ಮಾಡುತ್ತಿರುವ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ಮಾರ್ಚ್ 26 ರಂದು ಈ ಘಟನೆ ನಡೆದಿದೆ.