ಬೆಂಗಳೂರು:- ಬೆಂಗಳೂರಿನ ವಿವಿ ಪುರಂ ನಿವಾಸಿಗಳಿಗೆ ಪಾರಿವಾಳಗಳ ಕಾಟ ಶುರುವಾಗಿದೆ. ಪಾರಿವಾಳಗಳಿಗೆ ಜನರು ಕಾಳು, ಆಹಾರ ಸುರಿಯುತ್ತಿರುವುದು ಇಲ್ಲಿನ ನಿವಾಸಿಗಳಿಗೆ ಸಂಕಷ್ಟ ತಂದಿಟ್ಟಿದೆ.
ಹೀಗೆ ಸುರಿದ ಆಹಾರದಿಂದ ಜಂಕ್ಷನ್ ಗಬ್ಬೆದ್ದು ನಾರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ- ಪಕ್ಷಿಗಳಿಗೆ ಆಹಾರ ಕೊಡಬಾರದು ಎಂದು ಬಿಬಿಎಂಪಿಯೇ ನಿಯಮ ಮಾಡಿತ್ತು. ಆದ್ರೆ, ಇದೀಗ ಇಲ್ಲಿ ಸಮಸ್ಯೆಯಾಗುತ್ತಿರುವುದರಿಂದ ಪಾಲಿಕೆ ಕಣ್ಮುಚ್ಚಿ ಕುಳಿತಿರುವುದು ನಿವಾಸಿಗಳನ್ನ ಕೆರಳಿಸಿದೆ.
ಪಾರಿವಾಳಗಳ ರೆಕ್ಕೆ ಪುಕ್ಕಗಳಿಂದ ಅಸ್ತಮಾ, ಉಸಿರಾಟದ ಸಮಸ್ಯೆ ಎದುರಾಗುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು, ಪಾರಿವಾಳಗಳ ಜೊತೆಗೆ ಬೀಡಾಡಿ ದನಗಳ ಕಾಟ ಇದ್ದರೂ ಪಾಲಿಕೆ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ ಹೊರಹಾಕ್ತಿದ್ದಾರೆ.
ಇತ್ತ ಪಕ್ಷಿಗಳಿಗೆ ಕಾಳು ಸುರಿಯುತ್ತಿರುವುದರಿಂದ ಇಲಿ, ಹೆಗ್ಗಣಗಳ ಕಾಟದ ಜೊತೆಗೆ ಬೀಡಾಡಿ ದನಗಳು ಕೂಡ ಜನರಿಗೆ ಸಮಸ್ಯೆ ತಂದಿಟ್ಟಿದೆ. ಕಾಳು ಸುರಿಯುವ ಜಾಗದಲ್ಲೇ ವಾಹನಗಳು ಓಡಾಡೋದರಿಂದ ವಾಹನ ಸವಾರರಿಗೂ ಆಗಾಗ ಸಂಕಷ್ಟ ಎದುರಾಗುತ್ತಿದೆ. ಸದ್ಯ ಪಾರಿವಾಳಗಳಿಗೆ ಆಹಾರ ನೀಡಿದರೆ, ದಂಡ ಹಾಕುತ್ತೇವೆ ಅಂತಿದ್ದ ಪಾಲಿಕೆ, ಏರಿಯಾ ಜನ ಹಲವು ಬಾರೀ ದೂರು ಕೊಟ್ಟರೂ ಸೈಲೆಂಟ್ ಆಗಿರುವುದು ನಿವಾಸಿಗಳನ್ನ ಕಂಗಾಲಾಗಿಸಿದೆ.