ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಅವರ ತಾಯಿ ಸೋನಿಯಾ ಗಾಂಧಿ (Sonia Gandhi) ಮಂಗಳವಾರ ಸಂಜೆ ಬೆಂಗಳೂರಿನಿಂದ (Bengaluru) ದೆಹಲಿಗೆ ತೆರಳುತ್ತಿದ್ದ ವಿಮಾನ (Flight) ಭೋಪಾಲ್ನಲ್ಲಿ (Bhopal) ತುರ್ತು ಭೂಸ್ಪರ್ಶ (Emergency Landing) ಮಾಡಿದೆ. ಬೆಂಗಳೂರಿನಲ್ಲಿ 26 ಪಕ್ಷಗಳೊಂದಿಗೆ ನಡೆಸಿದ 2 ದಿನಗಳ ಚಿಂತನ ಮಂಥನ ಅಧಿವೇಶನದ ಬಳಿಕ ರಾಹುಲ್ ಹಾಗೂ ಸೋನಿಯಾ ಗಾಂಧಿ ದೆಹಲಿಗೆ ವಾಪಸಾಗುತ್ತಿದ್ದ ವೇಳೆ ಹವಾಮಾನ ವೈಪರಿತ್ಯದ ಹಿನ್ನೆಲೆ ವಿಮಾನವನ್ನು ಭೋಪಾಲ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಘಟನೆ ರಾತ್ರಿ 7:45ರ ವೇಳೆಗೆ ನಡೆದಿದೆ. ವಿಚಾರ ತಿಳಿಯುತ್ತಲೇ ಮಾಜಿ ಸಚಿವ ಪಿಸಿ ಶರ್ಮಾ, ಶಾಸಕ ಕುನಾಲ್ ಚೌಧರಿ ಸೇರಿದಂತೆ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. 2024ರ ಲೋಕಸಭೆಯ ಪ್ರಚಾರಕ್ಕಾಗಿ ವಿರೋಧ ಪಕ್ಷಗಳು ಒಟ್ಟಾಗಿ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲಯನ್ಸ್ ಅಥವಾ ‘ಇಂಡಿಯಾ’ವನ್ನು ರಚನೆ ಮಾಡಿ ಸಭೆಯನ್ನು ಮುಕ್ತಾಯಗೊಳಿಸಿದ್ದಾರೆ. ಇದು 2024 ರಲ್ಲಿ ಎನ್ಡಿಎ ಮತ್ತು ಇಂಡಿಯಾ ನಡುವಿನ ಯುದ್ಧ ಆಗಲಿದೆ ಎಂದು ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.