ಕೋಲ್ಕತ್ತಾ : ಅತ್ಯಾಚಾರವೇ ಕ್ರೂರ. ಅಂಥದ್ದರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಸಾವು ಕಂಡ ಯುವತಿಯ ಶವವನ್ನು ರಸ್ತೆಯಲ್ಲಿ ದರದರನೆ ಎಳೆದುಕೊಂಡು ಹೋಗುವ ಮೂಲಕ ಪಶ್ಚಿಮ ಬಂಗಾಳದ ಪೊಲೀಸರು ಕ್ರೌರ್ಯ ಮೆರೆದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಹಿನ್ನಲೆಯಲ್ಲಿ ಬಿಜೆಪಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟೀಕೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪೊಲೀಸ್ ಮತ್ತು ಪ್ಯಾರಾ ಪೋರ್ಸ್ ಮೇಲೆ ಉದ್ರಿಕ್ತ ಜನರು ಕಲ್ಲು ತೂರಾಟ ಮಾಡುತ್ತಿದ್ದ ವೇಳೆ,
ಗುಂಪಿನ ನಡುವಿನಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಶವವನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡಿದೆ. ಇದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯ, , ‘ಸಾಕ್ಷ್ಯವನ್ನು ನಿರ್ಮೂಲನೆ ಮಾಡುವುದು ಅಥವಾ ದುರ್ಬಲಗೊಳಿಸುವುದು ಮತ್ತು ಅಪರಾಧವನ್ನು ಮುಚ್ಚಿಹಾಕುವ ಉದ್ದೇಶದಿಂದ ಇಂತಹ ಆತುರ ಹೆಚ್ಚಾಗಿ ಕಂಡುಬರುತ್ತದೆ’ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಷ್ಟ್ರೀಯ ಮಹಿಳಾ ಆಯೋಗ ಪಶ್ಚಿಮ ಬಂಗಾಳ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಘಟನೆಯ ಕುರಿತಾಗಿ ವರದಿ ನೀಡುವಂತೆ ಸೂಚಿಸಿದೆ.
“ಈ ವೀಡಿಯೋದಲ್ಲಿ ಇರುವುದು ಉತ್ತರ ದಿನಜ್ಪುರದ ಕಲಿಯಗಂಜ್ನಲ್ಲಿ ರಾಜ್ಬೊಂಗ್ಷಿ ಸಮುದಾಯದ ಅಪ್ರಾಪ್ತ ಬಾಲಕಿಯ ದೇಹ. ಅತ್ಯಾಚಾರಕ್ಕೆ ಒಳಗಾಗಿ ಸಾವು ಕಂಡಿದ್ದ ಈಕೆಯ ದೇಹವನ್ನು ಪಶ್ಚಿಮ ಬಂಗಾಳ ಪೊಲೀಸರು ಅಮಾನವೀಯವಾಗಿ ಎಳೆದುಕೊಂಡು ಹೋಗುತ್ತಿದ್ದಾರೆ. ಸಾಕ್ಷ್ಯವನ್ನು ಮುಚ್ಚಿಹಾಕುವುದು ಅಥವಾ ದುರ್ಬಲಗೊಳಿಸುವುದು ಮತ್ತು ಅಪರಾಧವನ್ನು ಮುಚ್ಚಿಡುವ ಉದ್ದೇಶದಿಂದ ಇಂತಹ ಆತುರ ಹೆಚ್ಚಾಗಿ ಕಂಡುಬರುತ್ತದೆ.
ಅಚ್ಚರಿ ಎನ್ನುವಂತೆ ಮಮತಾ ಬ್ಯಾನರ್ಜಿ ಸರ್ಕಾರವು ಸ್ಥಳೀಯ ಬಿಜೆಪಿ ಶಾಸಕರಾದ ಸತ್ಯೇಂದ್ರ ನಾಥ್ ರೇ (ರಾಜಬೊಂಗ್ಶಿ ಸಮುದಾಯದಿಂದ) ಮತ್ತು ಬುಧರಾಯ್ ತುಡು ಅವರನ್ನು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಆದರೆ ಉತ್ತರ ದಿನಜ್ಪುರ ಟಿಎಂಸಿ ಅಧ್ಯಕ್ಷ ಕನಯಾ ಲಾಲ್ ಅಗರ್ವಾಲ್ಗೆ ಕುಟುಂಬವನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ. ಸರ್ಕಾರ ಇಲ್ಲಿ ಯಾರನ್ನು ರಕ್ಷಿಸಲು ಯತ್ನಿಸುತ್ತಿದೆ ಎನ್ನುವುದೇ ಅಚ್ಚರಿಯಾಗಿದೆ’ ಎಂದು ಮಾಳವೀಯ ಬರೆದುಕೊಂಡಿದ್ದಾರೆ.