ಭೋಪಾಲ್: ದೇವಸ್ಥಾನದ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪನ್ನಾದ ರಾಜಮನೆತನದ ಮಹಿಳೆ ಜಿತೇಶ್ವರಿ ದೇವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿ ವರ್ಷ ಪದ್ಧತಿಯಂತೆ ಪನ್ನಾ ಜಿಲ್ಲೆಯನ್ನು ಒಳಗೊಂಡಿರುವ ಬುಂದೇಲ್ಖಂಡ್ ಪ್ರದೇಶದ ಜನಪ್ರಿಯ ಧಾರ್ಮಿಕ ಕ್ಷೇತ್ರವಾದ ಶ್ರೀ ಜುಗಲ್ ಕಿಶೋರ್ ದೇವಸ್ಥಾನದಲ್ಲಿ ಈ ವರ್ಷವೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಆಚರಿಸಲಾಯಿತು.
ದೇವಸ್ಥಾನಕ್ಕೆ ಆಗಮಿಸಿದ್ದ ಜಿತೇಶ್ವರಿ ದೇವಿ ಅವರು ಸ್ವತಃ ‘ಆರತಿ’ ಮಾಡಬೇಕೆಂದು ಒತ್ತಾಯಿಸುವ ಮೂಲಕ ದೇವಾಲಯದ ಧಾರ್ಮಿಕ ಕ್ರಿಯೆಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ. ಬಳಿಕ ಗರ್ಭಗುಡಿ ಪ್ರವೇಶಿಸಲು ಯತ್ನಿಸಿದಾಗ ಎಡವಿ ಬಿದ್ದಿದ್ದಾರೆ. ರಾಜಮನೆತನದ ಸದಸ್ಯೆಯನ್ನು ದೇವಾಲಯದ ಆವರಣದಿಂದ ಹೊರಹೋಗುವಂತೆ ಪೊಲೀಸರು ಒತ್ತಾಯಿಸಿದ್ದಾರೆ.
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ದೇವಸ್ಥಾನದ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ವಾಗ್ವಾದ ನಡೆಸಿರುವುದೂ ದೃಶ್ಯದಲ್ಲಿ ಸೆರೆಯಾಗಿದೆ. ಜಿತೇಶ್ವರಿ ದೇವಿ ಕುಡಿದ ಅಮಲಿನಲ್ಲಿ ದೇವಸ್ಥಾನದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಯತ್ನಿಸಿದ್ದರು ಎಂದು ದೇವಸ್ಥಾನದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ವಾಗ್ವಾದದ ವೇಳೆ ಜಿತೇಶ್ವರಿ ದೇವಿಯನ್ನು ಪೊಲೀಸ್ ಸಿಬ್ಬಂದಿ ದೇವಸ್ಥಾನದಿಂದ ಹೊರಗೆ ಎಳೆದಿದ್ದಾರೆ.
ಘಟನೆ ಕುರಿತು ಪನ್ನಾ ಪೊಲೀಸ್ ಅಧೀಕ್ಷಕ ಸಾಯಿ ಕೃಷ್ಣ ಎಸ್ ತೋಟಾ ಪ್ರತಿಕ್ರಿಯಿಸಿ, ಸಂಪ್ರದಾಯದಂತೆ ರಾಜಮನೆತನದ ಪುರುಷರು ಮಾತ್ರ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ದೇವಾಲಯದಲ್ಲಿ ಪೊರಕೆಯಿಂದ ಶುಚಿಗೊಳಿಸುವ ಆಚರಣೆಯಾದ “ಚಾನ್ವಾರ್” ಅನ್ನು ಅರ್ಪಿಸುತ್ತಾರೆ. ಜಿತೇಶ್ವರಿ ದೇವಿಯ ಮಗನಿಗೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಕಾರಣ, ಅವರೇ ಸ್ವತಃ ಧಾರ್ಮಿಕ ವಿಧಿವಿಧಾನಗಳನ್ನು ಕೈಗೊಳ್ಳಲು ಮುಂದಾಗಿದ್ದರು ಎಂದಿದ್ದಾರೆ.
ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕರೆದುಕೊಂಡು ಹೋಗುವಾಗ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜಿತೇಶ್ವರಿ ದೇವಿ ಅವರು ಗಂಭೀರ ಆರೋಪ ಮಾಡಿದ್ದು, ರಕ್ಷಣಾ ಕಲ್ಯಾಣ ನಿಧಿಯಿಂದ ಪನ್ನಾದಲ್ಲಿ 65,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಆಪಾದಿತ ಹಗರಣದ ಬಗ್ಗೆ ದನಿಯೆತ್ತಿದ್ದಕ್ಕಾಗಿ ತನ್ನನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.