ಬೆಂಗಳೂರು:- ಡಿಸಿಎಂ ಡಿ.ಕೆ.ಶಿವಕುಮಾರ್ರವರು ಬೆಂಗಳೂರು ನಗರವನ್ನು ಬ್ರಾಂಡ್ ಬೆಂಗಳೂರು ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ನಡುವೆ ಬಿಬಿಎಂಪಿ ಅಧಿಕಾರಿಗಳಿಗೆ ನಗರದ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು. ಈಗಾಗಲೇ ಗಡುವು ಮುಗಿದು ಹಲವು ದಿನಗಳು ಕಳೆದಿವೆ.
ಆದರೆ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಮುಖ್ಯ ರಸ್ತೆಯಿಂದ ಹೆಸರುಘಟ್ಟ ರಸ್ತೆಯ ಸಾಕಷ್ಟು ಮುಖ್ಯ ರಸ್ತೆಗಳು ಗುಂಡಿ ಗಂಡಾಂತರಗಳಿಂದ ಕೂಡಿದ್ದು, ಅವ್ಯವಸ್ಥೆಯಾಗಿ ಉಳಿದಿದೆ.
ಗಡುವು ನೀಡಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ. ಹೀಗಾಗಿ ರಸ್ತೆ ದುರಸ್ತಿಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಮಂಡಿಯುದ್ದದ ಗುಂಡಿಗಳು ವಾಹನ ಸವಾರರಲ್ಲಿ ಮೃತ್ಯು ಕೂಪವಾಗಿ ಪರಿಣಮಿಸಿವೆ. ಯಮಸ್ವರೂಪಿ ಗುಂಡಿ ಗಂಡಾಂತರದಿಂದ ಎದ್ದು ಬಿದ್ದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಶಾಲೆಗೆ, ಶಾಲೆಯಿಂದ ಮನೆಗೆ ಕರೆತರಬೇಕಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನೂ ಮಳೆಗಾಲದಲ್ಲಿ ಎಲ್ಲಿ ಗುಂಡಿ ಇದೆಯೋ, ಎಲ್ಲಿ ಮಳೆಯ ನೀರು ಇದೆಯೋ ಎಂಬುದು ತಿಳಿಯದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಮ್ಮ ಅಳಲನ್ನು ಆಕ್ರೋಶದ ರೀತಿಯಲ್ಲಿ ದುರಸ್ತಿ ಮಾಡಲು ಮನವಿ ಮಾಡಿದ್ದಾರೆ.