ಮುಂಬೈ: ಕಿತ್ತು ತಿನ್ನುವ ಬಡತನ, ಹಳ್ಳಿಯಲ್ಲೇ ಜೀವನ, ಅಪೌಷ್ಟಿಕತೆಯಿಂದ ಬಳಲುತ್ತಾ ಶಕ್ತಿ ಕಳೆದುಕೊಂಡಿದ್ದ ಬಿಹಾರ ಮೂಲದ ಯುವಕ ಮುಕೇಶ್ಕುಮಾರ್ ಈಗ ಟೀಂ ಇಂಡಿಯಾ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಹೌದು. ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ಕುಗ್ರಾಮದವರಾದ ಮುಖೇಶ್ ಕುಮಾರ್ ಹಳ್ಳಿಯಲ್ಲಿ ಹುಟ್ಟಿ-ಬೆಳೆದು ಬಡತನದಲ್ಲೇ ಜೀವನ ಸಾಗಿಸುತ್ತಿದ್ದರು. ಇದೀಗ ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಹಲವು ವರ್ಷಗಳ ಕನಸನ್ನ ನನಸು ಮಾಡಿಕೊಂಡಿದ್ದಾರೆ.
ಮುಖೇಶ್ ಕುಮಾರ್ ಅವರ ತಂದೆ ಕಾಶಿನಾಥ್ ಸಿಂಗ್ ಟ್ಯಾಕ್ಸಿ ಚಾಲಕರಾಗಿದ್ದರು. ಕುಟುಂಬದ ನಿರ್ವಹಣೆಗೆ ಸಾಕಷ್ಟು ಕಷ್ಟಪಟ್ಟಿದ್ದರು. ಮುಕೇಶ್ ಕುಮಾರ್ ಕ್ರಿಕೆಟ್ ಆಡುವುದು ಆರಂಭದಲ್ಲಿ ಅವರ ತಂದೆಗೆ ಇಷ್ಟವಿರಲಿಲ್ಲ. 2012ರಲ್ಲಿ ಕೋಲ್ಕತ್ತಾಗೆ ಬಂದ ಮುಖೇಶ್ ಕುಮಾರ್, ರಾತ್ರಿ ವೇಳೆ ಈಡನ್ ಗಾರ್ಡನ್ ಕ್ರಿಕೆಟ್ ಅಂಗಳದ ಸಮೀಪದ ಛತ್ರಗಳಲ್ಲೇ ಮಲಗುತ್ತಿದ್ದರು. ಆದ್ರೆ ಮೆದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಮುಕೇಶ್ ತಂದೆ 2019ರಲ್ಲಿ ನಿಧನರಾಗಿದ್ದರು.
ಈ ಕುರಿತು ಮಾತನಾಡಿರುವ ಮುಕೇಶ್, ನಾನು ಯಾವಾಗಲೂ ಟೀಂ ಇಂಡಿಯಾ ಪರ ಟೆಸ್ಟ್ ಪಂದ್ಯ (Test Cricket Match) ಆಡಬೇಕೆಂಬ ಕನಸು ಕಂಡಿದ್ದೆ. ಈಗ ಆ ಸಮಯ ಬಂದಿದೆ. ನನ್ನ ಈ ಏಳಿಗೆಯನ್ನು ನಮ್ಮ ತಂದೆ ನೋಡಿದ್ದರೆ ನಿಜಕ್ಕೂ ಸಂತಸಪಡುತ್ತಿದ್ದರು ಎಂದು ಭಾವುಕರಾಗಿದ್ದಾರೆ.
ನಮ್ಮ ಪೋಷಕರು, ಸ್ನೇಹಿತರು ಸದಾ ನನಗೆ ಬೆಂಬಲ ನೀಡುತ್ತಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ “ವಿಷನ್ 2020″ರ ಮೂಲಕ ಆಗಿನ ಕಾರ್ಯದರ್ಶಿ ಸೌರವ್ ಗಂಗೂಲಿ, ಜೋಗ್ ದೀಪ್ ( ಮುಖರ್ಜಿ) ಹಾಗೂ ನನ್ನ ಗುರುಗಳಾದ ರಾಮದೇವ್ ಬೋಸ್ ಅವರು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್ನಲ್ಲಿ ನನಗೆ ಸದಾ ಸಲಹೆ ನೀಡಿ ನೆರವು ನೀಡುತ್ತಿದ್ದರು. ಅವರು ಸಹಾಯವಿಲ್ಲದೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದಿದ್ದಾರೆ.