ದೇವನಹಳ್ಳಿ, ಜೂನ್ 03: ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರದ ಪರಿಣಾಮ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ನಡೆದಿದೆ. ಉಮೇಶ್ ಮೃತ ದುರ್ದೈವಿ.
ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ರಸ್ತೆಯಲ್ಲಿ ಕ್ಯಾಂಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಬೈಕ್ ಸವಾರ ಉಮೇಶ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಸ್ಥಳಕ್ಕೆ ಅಕ್ಕ-ಪಕ್ಕದ ಜನರು, ಪೊಲೀಸರು ದೌಡಾಯಿಸಿದ್ದರು. ಬಳಿಕ ಆ್ಯಂಬುಲೆನ್ಸ್ಗೆ ಕರೆ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದರೂ ಸರ್ಕಾರಿ ಆಂಬ್ಯುಲೆನ್ಸ್ ಬರಲಿಲ್ಲ. ಕೊನೆಗೆ ಅರ್ಧ ಗಂಟೆ ಬಳಿಕ ಖಾಸಗಿ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿತ್ತು. ಆದರೆ ಅಷ್ಟೊತ್ತಿಗಾಗಲೆ ಗಂಭೀರವಾಗಿ ಗಾಯಗೊಂಡಿದ್ದ ಉಮೇಶ ರಕ್ತದ ಮಡುವಿನಲ್ಲಿ ನರಳಾಡಿ ಪಾಣಬಿಟ್ಟಿದ್ದರು. ಕುಟುಂಬಸ್ಥರ ನೋವು ಮುಗಿಲು ಮುಟ್ಟಿತ್ತು.
ದೊಡ್ಡಬಳ್ಳಾಪುರ ತಾಲೂಕಿಗೆ ಸರ್ಕಾರ ಒಟ್ಟು 5 ಆ್ಯಂಬುಲೆನ್ಸ್ಗಳನ್ನು ನೀಡಿದೆ. ಈ ಐದು ಆಂಬುಲೆನ್ಸ್ಗಳು ಪ್ರಾರಂಭದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಜನರಿಗೂ ಅನುಕೂಲವಾಗುತ್ತಿತ್ತು. ಆದರೆ ಇದೀಗ ಕಳೆದ ಹಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ಮೂರು ಮೂರು ಆಂಬ್ಯುಲೆನ್ಸ್ಗಳು ಗ್ಯಾರೇಜ್ ಸೇರಿವೆ.
ಆದರೆ, ಆರೋಗ್ಯ ಇಲಾಖೆ ಮಾತ್ರ ಈವರೆಗೂ ಅವುಗಳನ್ನ ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕಳೆದ ಹಲವು ದಿನಗಳಿಂದ ತುರ್ತು ಸಂದರ್ಭದಲ್ಲಿ ಅಂತ ಜನ 108 ಗೆ ಕರೆ ಮಾಡಿ ಗಂಟೆ ಗಟ್ಟಲೆ ಕಾದು ನಿಂತು ಆಂಬ್ಯುಲೆನ್ಸ್ ಮಾತ್ರ ಬರುತ್ತಿಲ್ಲ. ಕಳೆದ ಹಲವು ದಿನಗಳಿಂದ ಅಪಘಾತಕ್ಕೀಡದ ಜನರು ಸಮಯಕ್ಕೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಪರದಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳೆದ ವರ್ಷ 70 ಜನ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಈ ವರ್ಷ ಇಲ್ಲಿಯವರಗೆ, 36 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆಂಬ್ಯುಲೆನ್ಸ್ಗಳನ್ನು ರಿಪೇರಿ ಮಾಡಿಸಲು ಆರೋಗ್ಯ ಇಲಾಖೆ ಹಿಂದೆ-ಮುಂದೆ ನೋಡುತ್ತಿದೆ. ಇದೇ ರೀತಿ ಮುಂದವರೆದರೆ ಸರ್ಕಾರ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ಧ ಹೋರಾಟ ನಡೆಸುವುದಾಗಿ ಸ್ಥಳಿಯ ಹೋರಾಟಗಾರ ರಾಜಘಟ್ಟ ರವಿ ಎಚ್ಚರಿಕೆ ನೀಡಿದ್ದಾರೆ.