ಹಾವೇರಿ: ಬಡವ ನೀ ಮಡಗಿದಂಗೆ ಇರು ಎಂಬಂತೆ ತಾವಾಯಿತು ತಮ್ಮ ಕೆಲಸವಾಯಿತು ಎನ್ನುತ್ತಿದ್ದ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ ಕಾರಣ ಈ ಕುಟುಂಬಸ್ಥರು ರಾತ್ರಿ ಹಾಯಾಗಿ ನಿದ್ರೆಗೆ ಜಾರಿದ್ದರು. ಆದರೆ ನಸುಕಿನಜಾವ ಮಲಗಿದ್ದವರ ಮೇಲೆ ಆ ಮನೆಯ ಮೇಲ್ಚಾವಣಿ ಯಮಸ್ವರೂಪಿಯಾಗಿದೆ. ಏಕಾಏಕಿ ಕುಸಿದಿದ್ದರಿಂದ ಮೈಮೇಲೆ ಮಣ್ಣು ಕುಸಿದು ಮಲಗಿದ್ದ ಕುಟುಂಬ ಮೂವರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮಳೆಯಿಂದಾದ ಈ ದುರಂತದಲ್ಲಿ ದೊಡ್ಡಮ್ಮನ ಜೊತೆ ಮಲಗಿದ್ದ ಎರಡು ಕಂದಮ್ಮಗಳ ಸಾವು ಸಂಬಂಧಿಕರನ್ನ, ನೆರೆಹೊರೆಯವರನ್ನ ಎಲ್ಲರನ್ನ ಶೋಕ ಸಾಗರದಲ್ಲಿ ಮುಳುಗಿವಂತೆ ಮಾಡಿದೆ.
ಶುಕ್ರವಾರ ನಸುಕಿನಜಾವ 4 ಗಂಟೆಗೆ ಮಳೆಯ ಅಬ್ಬರದ ನಡುವೆ ಯಾರು ಊಹಿಸಲಾಗದ ದುರಂತವೊಂದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಹಾಯಾಗಿ ಮಲಗಿದ್ದ ಹರಕೋನಿ ಕುಟುಂಬಸ್ಥರ ಮೇಲೆ ಮನೆ ಮೇಲ್ವಾವಣೆ ಕುಸಿದು ಬಿದ್ದಿದೆ. ಕೂಗಾಟ ಚಿರಾಟ ಕಂಡ ಅಕ್ಕಪಕ್ಕದ ಜನರು,ಮಣ್ಣಿನಡಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಆದರೆ ಒಂದುವರೆ ವರ್ಷದ ಅವಳಿ ಕಂದಮ್ಮಗಳು, ತನ್ನ ದೊಡ್ಡಮನ ಜೊತೆ ಉಸಿರು ಚಲ್ಲಿದ್ದರು. ಅನನ್ಯ ಮತ್ತು ಅಮೂಲ್ಯ ಎಂಬ ಅವಳಿ ಮಕ್ಕಳು ಹಾಗೂ ಚನ್ನಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದರು. ಮಣ್ಣಲ್ಲಿ ಸಿಲುಕಿ ಗಾಯಗೊಂಡಿದ್ದ ಸುನೀತಾ, ಮುತ್ತು ಹಾಗೂ ಯಲ್ಲವ್ವ ಎಂಬುವವರು ರಕ್ಷಿಸಿ ಆಸ್ಪತ್ರೆ ಸೇರಿಸಲಾಗಿದೆ.