ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆ ವಿವಾದದೊಂದಿಗೆ ಇದೀಗ ಪ್ರತಿಪಕ್ಷಗಳು ‘ಸೆಂಗೋಲ್’ (Sengol) ವಿವಾದವನ್ನೂ ಎಳೆದುತಂದಿದೆ. 7 ದಶಕಗಳ ಕಾಲ ಈ ಚಿನ್ನದ ಸೆಂಗೋಲ್ ಅನ್ನು ಅಲಹಾಬಾದ್ನ ವಸ್ತುಸಂಗ್ರಹಾಲಯದಲ್ಲಿ (Allahabad Museum) ಇಡಲಾಗಿದ್ದು, ಇದೀಗ ಸಂಸತ್ ಭವನ (New Parliament Building) ಉದ್ಘಾಟನೆ ವೇಳೆ ಸ್ಪೀಕರ್ ಆಸನದ ಬಳಿ ಇರಿಸಲಾಗುತ್ತಿದೆ.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರಿಗೆ ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ಮಾಡುವ ಸಂಕೇತವಾಗಿ ಸೆಂಗೋಲ್ ಅನ್ನು ನೀಡಲಾಗಿತ್ತು ಎಂಬ ಮಾತು ಕೇಳಿಬಂದರೂ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. ಆದರೆ ಇವೆಲ್ಲದಕ್ಕೂ ಬಿಜೆಪಿ ನಾಯಕರು ಉತ್ತರ ನೀಡಿದ್ದಾರೆ. ಇದನ್ನು ಹುಡುಕಲು 2 ವರ್ಷವೇ ಬೇಕಾಯಿತು ಎಂಬ ಸಂಗತಿ ಅತ್ಯಂತ ಕುತೂಹಲ ಮೂಡಿಸಿದೆ.
ಸೆಂಗೋಲ್ ಬೆಳಕಿಗೆ ಬಂದಿದ್ದು ಯಾವಾಗ?
2021ರಲ್ಲಿ ಅಂಕಣಕಾರ ಎಸ್ ಗುರುಮೂರ್ತಿ ಅವರು ‘ತುಘಲಕ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ಸೆಂಗೋಲ್ ಹುಡುಕಾಟ ಆರಂಭವಾಯಿತು. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ಸೆಂಗೋಲ್ ಹುಡುಕಾಟ ನಡೆಸಿತು. 1947ರ ಆಗಸ್ಟ್ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದಾಗ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿಕೊಂಡಿತು. ಇದೀಗ 77 ವರ್ಷ ಹಳೆಯ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ನಿರ್ಧಾರಿಸಿದೆ.
ಗುರುಮೂರ್ತಿ ಬರೆದ ಲೇಖನದಲ್ಲೇನಿತ್ತು?
ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ್ಯ ಹಾಗೂ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಸೆಂಗೋಲ್ ಅನ್ನು ಹಸ್ತಾಂತರ ಮಾಡಿದ್ದರು ಎಂದು ಗುರುಮೂರ್ತಿ ಲೇಖನ ಬರೆದಿದ್ದರು. ಈ ಲೇಖನ ಪ್ರಕಟವಾದ ಕೆಲ ದಿನಗಳ ಬಳಿಕ ಖ್ಯಾತ ನೃತ್ಯಗಾರ್ತಿ ಡಾ.ಪದ್ಮಾ ಸುಬ್ರಮಣ್ಯಂ ಅವರು ಅದರ ಇಂಗ್ಲಿಷ್ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದರು. ಅದರೊಂದಿಗೆ ಪತ್ರವನ್ನೂ ಕಳುಹಿಸಿ, ಈ ಪವಿತ್ರ ಹಾಗೂ ಐತಿಹಾಸಿಕ ಸಂಗೋಲ್ ಹಸ್ತಾಂತರ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಈ ವಿಚಾರವನ್ನು ಮೋದಿ ಸರ್ಕಾರ 2021ರ ಸ್ವಾತಂತ್ರ್ಯೋತ್ಸವದಂದು ಬಹಿರಂಗಪಡಿಸಬೇಕು ಎಂದು ಕೋರಿಕೊಂಡಿದ್ದರು.
2 ವರ್ಷ ಸೆಂಗೋಲ್ಗಾಗಿ ಹುಡುಕಾಟ:
ಪದ್ಮಾ ಸುಬ್ರಮಣ್ಯಂ ಅವರ ಪತ್ರವನ್ನು ಗಮನಿಸಿದ ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟ ನಡೆಸಿತು. ಸೆಂಗೋಲ್ನ ಅಸ್ಥಿತ್ವ ನಿಜವೇ ಅಥವಾ ಹುಸಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಹಳೆಯ ಪತ್ರಿಕಾ ಲೇಖನ, ಪುಸ್ತಕಗಳು ಹಾಗೂ ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿದರು.
ಕೊನೆಗೆ ನೆಹರು ಅವರಿಗೆ ತಮ್ಮ ನಿವಾಸದಲ್ಲಿಯೇ ಸೆಂಗೋಲ್ ಅನ್ನು ಹಸ್ತಾಂತರ ಮಾಡಲಾಗಿತ್ತು ಎಂಬುದು ತಿಳಿದುಬಂತು. ಇದನ್ನು ಖಚಿತಪಡಿಸಿಕೊಳ್ಳಲು ಸಮಾರಂಭದ ಫೋಟೋಗಾಗಿ ಹುಡುಕಾಟ ನಡೆಸಲಾಯಿತು. ನೆಹರು ಅವರ ಖಾಸಗಿ ದಾಖಲೆಗಳನ್ನೂ ಪರಿಶೀಲಿಸಲು ಮನವಿ ಮಾಡಲಾಯಿತು. ಈ ವೇಳೆ 1947ರ ಆಗಸ್ಟ್ 25 ರಂದು ‘ಟೈಮ್’ ನಿಯತಕಾಲಿಕೆಯಲ್ಲಿ ಸೆಂಗೋಲ್ ಸಮಾರಂಭದ ಕುರಿತು ವಿವರವಾಗಿ ಬರೆಯಲಾಗಿದ್ದ ವರದಿ ಲಭಿಸಿತು.
ನೆಹರು ವಾಕಿಂಗ್ ಸ್ಟಿಕ್ ಹೆಸರಲ್ಲಿ ಪ್ರದರ್ಶನ:
ಸೆಂಗೋಲ್ ಸಿಕ್ಕಿದ್ದು ನಿಜ ಆದರೆ ಅದು ಎಲ್ಲಿದೆ ಎನ್ನುವುದು ಪತ್ತೆಯಾಗಲಿಲ್ಲ. ಸರ್ಕಾರ ಹಲವು ಮ್ಯೂಸಿಯಂಗಳಲ್ಲಿ ಸೆಂಗೋಲ್ ಹುಡುಕಾಟ ಆರಂಭಿಸಿತು. ಕೊನೆಗೆ ಈ ಸೆಂಗೋಲ್ 70 ವರ್ಷಗಳಿಂದ ಅಲಹಾಬಾದ್ನ ಮ್ಯೂಸಿಯಂನಲ್ಲಿ ಇರುವುದು ತಿಳಿದುಬಂತು. ಆದರೆ ಅದಕ್ಕೆ ನೆಹರು ಅವರು ಬಳಸುತ್ತಿದ್ದ ಚಿನ್ನದ ವಾಕಿಂಗ್ ಸ್ಟಿಕ್ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕೆ ಇಡಲಾಗಿತ್ತು.
ಇದೀಗ ಮರೆಮಾಚಲಾಗಿದ್ದ ಇತಿಹಾಸವನ್ನು ಬಯಲಿಗೆ ತಂದು ಸರ್ಕಾರ ಸೆಂಗೋಲ್ ಅನ್ನು ಮ್ಯೂಸಿಯಂನಿಂದ ತರಿಸಿ ಹೊಸದಾಗಿ ನಿರ್ಮಾಣವಾಗಿರುವ ಸಂಸತ್ ಭವನದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿದೆ. ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ.