ನವದೆಹಲಿ ;- ಇಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಎಸ್ಸಿಒ ಶೃಂಗಸಭೆ ಜರುಗಲಿದೆ. ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ಎಂಟು ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಇರಾನ್ ಅನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭ ಆಗಲಿದೆ. ಸದ್ಯ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಯಲ್ಲಿ ಇರಾನ್ ಅನ್ನು ಒಕ್ಕೂಟದ ಒಂಬತ್ತನೇ ಸದಸ್ಯ ರಾಷ್ಟ್ರವನ್ನಾಗಿ ಸೇರ್ಪಡೆ ಮಾಡಲಾಗುತ್ತಿದೆ. ಈ ಒಕ್ಕೂಟದಲ್ಲಿ ಬೆಲಾರಸ್ ಸೇರ್ಪಡೆಗೆ ರಷ್ಯಾ ಬಲವಾಗಿ ಬೆಂಬಲ ನೀಡಿದೆ. ಇದಲ್ಲದೇ ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ದೇಶಗಳು ಕೂಡ ಎಸ್ಸಿಒಗೆ ಸೇರಲು ಬಯಸುತ್ತಿವೆ. ಆದರೆ ಬೆಲಾರಸ್ ಮತ್ತು ಮಂಗೋಲಿಯಾವನ್ನು ವೀಕ್ಷಕ ರಾಜ್ಯಗಳಾಗಿ ಆಹ್ವಾನಿಸಲಾಗಿದೆ. ಮಾಹಿತಿ ಪ್ರಕಾರ, ತುರ್ಕಮೆನಿಸ್ತಾನವನ್ನು ಸಹ ಅತಿಥಿಯಾಗಿ ಆಹ್ವಾನಿಸಲಾಗಿದೆ.
1996ರಲ್ಲಿ ರೂಪುಗೊಂಡ ಈ ಒಕ್ಕೂಟದಲ್ಲಿ ಭಾರತ 2017ರಲ್ಲಿ ಪೂರ್ಣ ಸದಸ್ಯತ್ವವನ್ನು ಪಡೆಯಿತು. ಇದೀಗ ಮೊದಲ ಬಾರಿ ಭಾರತ ಎಸ್ಸಿಒ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಿದೆ.