ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 14 ವರ್ಷದ ಅತ್ಯಾಚಾರ ಸಂತ್ರಸ್ತೆಗೆ 30ನೇ ವಾರದಲ್ಲಿ ಗರ್ಭಪಾತ ಮಾಡಲು ಕೋರ್ಟ್ ಅನುಮತಿ ನೀಡಿದೆ. ಅತ್ಯಾಚಾರದಿಂದ ಅಪ್ರಾಪ್ತೆ ಗರ್ಭಿಣಿಯಾಗಿದ್ದಳು. ಬಳಿಕ ಗರ್ಭಪಾತಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು.
ಮುಖ್ಯ ನ್ಯಾ. ಡಿವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವೈದ್ಯಕೀಯ ವರದಿಗಳನ್ನು ಆಧರಿಸಿ ಗರ್ಭಪಾತಕ್ಕೆ ಅನುಮತಿ ನೀಡಿದೆ. ಇದೊಂದು ಅತ್ಯಾಚಾರ ಪ್ರಕರಣವಾಗಿದ್ದು, ಸಂತ್ರಸ್ತೆಗೆ 14 ವರ್ಷ ವಯಸ್ಸಾಗಿದೆ. ಈ ಅಸಾಧಾರಣ ಪ್ರಕರಣದಲ್ಲಿ ಗರ್ಭಪಾತವನ್ನು ಅನುಮತಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
ಏಪ್ರಿಲ್ 19 ರಂದು ಸುಪ್ರೀಂ ಕೋರ್ಟ್ 14 ವರ್ಷದ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತ್ತು. ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರ ಪೀಠವು ಏಪ್ರಿಲ್ 19ರ ಶುಕ್ರವಾರ ಸಂಜೆ 4.30ಕ್ಕೆ ಈ ಪ್ರಕರಣದ ತುರ್ತು ವಿಚಾರಣೆ ನಡೆಸಿತ್ತು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ವಾದ ಮಂಡಿಸಿದ್ದರು. ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಿದ್ದರೆ ಅಥವಾ ಮಾಡದಂತೆ ಸೂಚಿಸಿದರೆ ಬಾಲಕಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕೋರ್ಟ್ ಮುಂಬೈನ ಸಿಯಾನ್ ಆಸ್ಪತ್ರೆಯಿಂದ ವರದಿಯನ್ನು ಕೇಳಿತ್ತು.