ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ (Karnataka Muslim Reservation) ರದ್ದುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ. ಮೇ 9 ರವರೆಗೆ ಈ ಆದೇಶವನ್ನು ಜಾರಿಗೊಳಿಸದಂತೆ ಕರ್ನಾಟಕ ಸರ್ಕಾರಕ್ಕೆ (Karnataka Government) ಸುಪ್ರೀಂ ಕೋರ್ಟ್ ಹೇಳಿದೆ.
2ಬಿ ಅಡಿ ಮುಸ್ಲಿಮರಿಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿತ್ತು. ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನ್ಯಾ. ಕೆ.ಎಂ. ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮೇ 9 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೂ ಮೀಸಲಾತಿ ಜಾರಿಗೆ ನ್ಯಾಯಾಲಯ ತಡೆ ನೀಡಿದೆ.
ಅಫಿಡವಿಟ್ ಸಿದ್ಧವಾಗಿದೆ. ಆದರೆ ಸಾಂವಿಧಾನಿಕ ಪೀಠದ ವಿಚಾರಣೆಯಲ್ಲಿದ್ದೇನೆ. ಹೀಗಾಗಿ ವಿಚಾರಣೆ ಮುಂದೂಡಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು. ಆದರೆ ಇದಕ್ಕೆ ಅರ್ಜಿದಾರ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಅರ್ಜಿದಾರ ಪರ ವಕೀಲರಾದ ದುಷ್ಯಂತ್ ದವೆ, ಇದು ಅತ್ಯಂತ ಮಹತ್ವದ ಪ್ರಕರಣ. ವಿಚಾರಣೆ ಮುಂದೂಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ಪೀಠವು, ವಾದ ಪ್ರತಿವಾದ ಆಲಿಸಿದ ಬಳಿಕ ಮೇ 9 ಕ್ಕೆ ವಿಚಾರಣೆ ಮುಂದೂಡಿದೆ. ಅರ್ಜಿ ವಿಚಾರಣೆಗೆ ಮುಂದೂಡಿಕೆ ಆಕ್ಷೇಪ ಹಿನ್ನಲೆ ಹಳೆ ಆದೇಶ ಮುಂದುವರಿಸುವುದಾಗಿ ಕೋರ್ಟ್ ಹೇಳಿದೆ.