ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿನ ಸಾಲು ಇದೀಗ ಸಿನಿಮಾದ ಟೈಟಲ್ ಆಗಿ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಟೈಟಲ್ ಅನ್ನು ಅನಾವರಣ ಮಾಡಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಯು ಟರ್ನ್ 2 ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಚಂದ್ರು ಓಬಯ್ಯ ಈಗ ಮತ್ತೊಂದು ಕ್ಯಾಚೀ ಟೈಟಲ್ನೊಂದಿಗೆ ಈ ಬಾರಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ವೈರಲ್ ಆಗಿದ್ದ ಹಾಡಿನ ಟೈಟಲ್ ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ಈ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮ್ಯೂಸಿಕ್ ಅಡ್ಡಾದ ಲೋಕೇಶ್ ಟೈಟಲ್ ಲಾಂಚ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ ಯುಟರ್ನ್ 2 ಆದ ನಂತರ ರಾಮು ಅಂಡ್ ರಾಮು ಚಿತ್ರ ಮಾಡಿದ್ದೆ. ಅದು ಸೆನ್ಸಾರ್ ಹಂತದಲ್ಲಿದೆ. ಅಲ್ಲದೇ ಪ್ಯಾಟಿ ಹುಡ್ಗಿ ಹಳ್ಳಿ ಲೈಫು ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಈಗ ಕರಿಮಣಿ ಮಾಲಿಕ ನೀನಲ್ಲ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದು ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇನೆ ಎಂದಿದ್ದಾರೆ.
“ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ ಈ ಚಿತ್ರದಲ್ಲಿದೆ. ನಾನು ರೆಡಿ ಮಾಡಿಕೊಂಡಿದ್ದ ಕಥೆಗೆ ಈ ಟೈಟಲ್ ಸೂಕ್ತ ಎನಿಸಿ ಇಟ್ಟಿದ್ದೇನೆ. ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿ, 40 ದಿನಗಳ ಕಾಲ ಬೆಂಗಳೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಶೂಟಿಂಗ್ ಮಾಡೋ ಪ್ಲಾನಿದೆ. ಚಿತ್ರದಲ್ಲಿ 4 ಹಾಡುಗಳಿದ್ದು, ಮ್ಯೂಸಿಕ್ ಕೂಡ ನಾನೇ ಮಾಡುತ್ತಿದ್ದೇನೆ. ನಾಯಕಿಯಾಗಿ ರಮಿಕಾ ಸುತಾರ ಅಭಿನಯಿಸುತ್ತಿದ್ದು, ನಾಯಕನ ಪಾತ್ರಕ್ಕೆ ಹುಡುಕಾಟ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರ ತಿಳಿಸುತ್ತೇನೆ” ಎಂದು ಹೇಳಿದರು.
ನಂತರ ನಾಯಕಿ ಪಾತ್ರ ಮಾಡುತ್ತಿರುವ ರಮಿಕಾ ಸುತಾರ ಮಾತನಾಡುತ್ತಾ “ನಾನು ಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಅವಕಾಶ ಸಿಕ್ಕಿರಲಿಲ್ಲ, ಆ್ಯಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಹೂ ಮಾರುವ ಹುಡುಗಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದರು.
ಮತ್ತೊಬ್ಬ ನಟಿ ಮೀನಾ ಕಿರಣ್ ಮಾತನಾಡಿ “ನಾನು ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಿಂದೆ ಚಂದ್ರು ಅವರ ಜೊತೆ ಒಂದು ಚಿತ್ರ ಮಾಡಿದ್ದೆ. ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ ಎಂದರು”.